ಮಕ್ಕಳಿಗಾಗಿಯೂ , ಮಕ್ಕಳ ಕಥೆಗಳಲ್ಲಿ ಆಸಕ್ತಿ ಇರುವವರಿಗಾಗಿಯೂ ,
ಕಿರು ಕಥೆಗಳು, ದೊಡ್ಡ ಕಥೆಗಳು, ಸುಮ್ಮನೆ ಹರಟೆ ಮಾತು
ಇತ್ಯಾದಿಗಳ ಸಂಪುಟ.

Sunday, January 15, 2012

Keerthi Nidhi Kesari Singha - 26

ಕೀರ್ತಿ ನಿಧಿ ಕೇಸರಿಸಿಂಘ

ಆಶ್ಚರ್ಯವೇ ? ಆನಂದವೇ?  ಆಘಾದವೇ?
ಇಲ್ಲ, ಈ  ಎಲ್ಲ ಭಾವನೆಗಳೂ ಬೆರೆತಿದ್ದಂತಹ  ಆಶ್ಚರ್ಯಾನಂದಾಘಾದವೇ ?!!
ತನ್ನ ಮನೆಯ ಬಾಗಿಲಲ್ಲಿ ಬಂದು  ನಿಂದವರನ್ನು ಕಂಡು ಕ್ಷೇತ್ರಪಾಲೈಯನಿಗೆ ಕ್ಷಣ ಮಾತ್ರ  ಉಸಿರು ಕಟ್ಟಿದಂತಾಯಿತು.

" ನಂಜಪ್ಪೈಯನವರೆ! "

" ಹೇಳದೆ ಕೇಳದೆ ಬಂದು ನಿಂತಿದ್ದೇವೆ! ಕ್ಷಮಿಸಿ ಕ್ಷೇತ್ರಪಾಲೈಯನವರೆ!ತೊಂದೆರೆಗೆ ಕ್ಷಮಿಸಿ."

" ಆಯೋ!ಹಾಗೆಲ್ಲ ಅನ್ನದಿರಿ! ! ನಿಮ್ಮ ಅನಿರೀಕ್ಷಿತವಾದ ಆಗಮನದಿಂದ ಸ್ವಲ್ಪ ಕಕ್ಕಾಬಿಕ್ಕಿಯಾಗಿ ಹೋದೆನಷ್ಟೆ. ಬನ್ನಿ ಬನ್ನಿ  !"

ಕ್ಷೇತ್ರಪಾಲೈಯ ಸುಧಾರಿಸಿಕೊಂಡು, ಅತೀತ  ಉತ್ಸಾಹದೊಡನೆ   ತನ್ನ ಆಪ್ತ  ಮಿತ್ರರನ್ನು ಆಹ್ವಾನಿಸಿದ.



" ನಿಮಗೆ ಸುದ್ದಿ ಕಳುಹಿಸಿ,ನಿಮ್ಮ ಉತ್ತರಕ್ಕೆ ಕಾದು, ನಂತರ ಹೊರಡುವ  ವೇಳೆಗೆ, ನಾನೇ ಖುದ್ದಾಗಿ ಬರುವುದು ವಾಸಿ ಎನ್ನಿಸಿತು."

" ಒಳ್ಳೆ ಕೆಲಸ ಮಾಡಿದಿರಿ. ಬನ್ನಿ, ಒಳಕ್ಕೆ ಬನ್ನಿ.ಪೊನ್ನ!ಪೋನ್ನತಾನೆ ನೀನು?ಹೇಗೆ ಬೆಳೆದುಬಿಟ್ಟಿದ್ದೀಯಪ್ಪ! ಅದ್ಸರಿ,ರನ್ನ ಏನು ಮಾಡಿಕೊಂಡಿದ್ದಾನೆ?"

ತಂದೆಯೊಡನೆ ಆಗಮಿಸಿದ್ದ ಪೊನ್ನ ಹುಸಿ ನಗೆ ಬೀರಿ ಸಂಕೋಚದಿಂದ ತಲೆ ತಗ್ಗಿಸಿದ . 

ಕ್ಷೇತ್ರ ಪಾಲೈಯನ ಸಂತಸಕ್ಕೆ ಪಾರವೇ ಇರಲಿಲ್ಲ. ಪೊನ್ನನ ಬೆನ್ನು ತಟ್ಟುತ್ತಲೇ   ಇಬ್ಬರನ್ನೂ   ಮನೆಯೊಳಕ್ಕೆ  ಕರೆದೊಯ್ದ.

"ರನ್ನ ಸತ್ಯಮಂಗಳದಲ್ಲಿ ಸರದಾರ್ ಅಸ್ಲಾಮ್ ಜಾನವರು ಕೊಡಿಸಿದ  ನೌಕರಿಯಲ್ಲಿ  ತೃಪ್ತಿಯಿಂದ ಇದ್ದಾನೆ.ಆದರೆ ಇವನ ಆಸೆಯೇ  ಬೇರೆಯಾಗಿದೆ. ಇವನಿಗೆ  ಪಟ್ನದಲ್ಲಿ ಯಾವುದಾದರು ನೌಕರಿಗೆ ಸೇರುವ ಆಸೆ. ಪೀಡಿಸುತ್ತಲೇ ಇದ್ದ.ಅದಕ್ಕೆ ಈತನನ್ನೂ ಜೊತೆಯಲ್ಲಿ ಕರೆ ತಂದೆ."
ನಂಜಪ್ಪೈಯನವರು ಬೇಸರದಿಂದ  ನುಡಿದರು.

"ಇರಲಿ ಬಿಡಿ.ಇದು ಸಂತೋಷದ ಸುದ್ದಿ ಇಲ್ಲವೇ ? ಈಗಿನ ಕಾಲದ ಹುಡುಗರ ಕನಸುಗಳಿಗೆ ಎಲ್ಲೆ ಎಲ್ಲಿದೆ?ಕನಸುಗಳೂ ಆಕಾಂಕ್ಷೆಗಳೂ ಅವರನ್ನು ಉನ್ನತಿಯ ತುತ್ತ ತುದಿಗೆ ಖಂಡಿತ ಏರಿಸುತ್ತವೆ ."


ಗೆಲುವಾಗಿ ನುಡಿಯುತ್ತಲೇ ಇಬ್ಬರನ್ನೂ ಹಜಾರಕ್ಕೆ ಕರೆತಂದು, ಅಲ್ಲಿದ್ದ   ಆಸನಗಳ ಕಡೆ  ಕೈ ತೋರಿದ ಕ್ಷೇತ್ರಪಾಲೈಯ .

ದೂರದ ಪಯಣದಿಂದ ದಣಿದಿದ್ದ ನಂಜಪ್ಪೈಯನವರು ತನ್ನ ತೋಳಿಗೆ  ತೂಗು ಹಾಕಿದ್ದ ಚೀಲವನ್ನು ಕೆಳಗಿಟ್ಟು 'ಉಸ್ಸ್'ಎಂದು ಕುಳಿತರು.

" ಬನ್ನಿ,ಬನ್ನಿ! ರುಕ್ಮಿಣಿಯಕ್ಕ  ಚೆನ್ನಾಗಿದ್ದಾರೆಯೇ ? ಅವರನ್ನೂ ಕರೆ ತಂದಿರ ಬೇಕಿತ್ತು."

ಕ್ಷೇತ್ರ ಪಾಲೈಯನ ಮಡದಿ ಕುಡಿಯಲು  ನೀರು ತಂದಿಟ್ಟು ಕುಶಲ ವಿಚಾರಿಸಿದಳು.



" ಏನೂ ಕೊರತೆ ಇಲ್ಲಾಮ್ಮ.ಇಲ್ಲಿಗೆ ಬರದಿದ್ದರೂ ಸದಾ ಅವಳಿಗೆ ಪಟ್ನದ ನೆನಪೇ. ಕೇಸರಿಯನ್ನು ಕುರಿತ ಚಿಂತೆ ಅವಳನ್ನು ಸಾದಾ  ಕಾಡುತ್ತಲೇ ಇದೆ ."

" ಪಾಪ! ತುಂಬಾ ಹಚ್ಚಿಕೊಂಡು ಬಿಟ್ಟಿದ್ದರಲ್ಲವೇ? ಅವನೂ ಏನೂ ಕಡಿಮೆ ಇರಲಿಲ್ಲವಲ್ಲ!ಆತನನ್ನು ಪಟ್ನಕ್ಕೆ ಕರೆ ತರಲು ಎಷ್ಟೆಲ್ಲ ನಾಟಕವಾಡ ಬೇಕಾಗಿತ್ತು!"ಕ್ಷೇತ್ರ ಪಾಲೈಯನ ಮನದಲ್ಲಿ  ಹಳೆಯ ನೆನಪುಗಳು  ಮೆರವಣಿಗೆ ಹೋದವು .

 "ಸರಿ. ಕೈಕಾಲು ತೊಳೆದು ಕೊಂಡು ಮೊದಲು  ಪಲಹಾರ ಮಾಡುವಿರಂತೆ. ನಂತರ ಮುಂದಿನ ಮಾತು." ಎಂದ ಕ್ಷೇತ್ರಪಾಲೈಯ ಮಡದಿಯ ಕಡೆ ಕಣ್ಣು ಹೊರಳಿಸಿದ.


"ಇಗೋ ! ನೀವು ಸ್ನಾನ ಮಾಡಿ ಬರುವ ವೇಳೆಗೆ ಪಲಹಾರ ತಯಾರಾಗಿಬಿಡುತ್ತದೆ." 


ಕ್ಷೇತ್ರಪಾಲೈಯನ ಮಡದಿ ಅಡುಗೆ  ಕೋಣೆ   ಸೇರಿದಳು.

"ಮೊದಲಿಗೆ  ಒಂದೇ ಒಂದು ಪ್ರಶ್ನೆ  ಗೆಳೆಯರೇ. ನನ್ನ ಕೇಸರಿ ಹೇಗಿದ್ದಾನೆ? ಇಲ್ಲಿ ಏನು ಮಾಡಿಕೊಂಡಿದ್ದಾನೆ? ಈಚೆಗೆ  ಸರದಾರ್ ಅಸ್ಲಾಮ್ ಜಾನ್ ಕೂಡ ನಮ್ಮೂರಕಡೆ ಕಾಣಿಸಿಕೊಂಡಿಲ್ಲ. ಹುಡುಗನ ಬಗ್ಗೆ ಇತ್ತೀಚಿಗೆ  ಯಾವ ಸುದ್ದಿಯೂ ಇಲ್ಲವಲ್ಲಾ ಎಂದು ರುಕ್ಮಿಣಿಗೆ  ಬಹಳವಾಗಿ ಕಾಳಜಿಯಾಗಿಬಿಟ್ಟಿದೆ."




ನಂಜಪ್ಪೈಯನವರ ದನಿಯಲ್ಲಿ ಆತಂಕ ತುಂಬಿ ತುಳುಕಿತು.


 "ಅವನಿಗೇನು  ಕಡಿಮೆ ಹೇಳಿ ನಂಜಪ್ಪೈಯನವರೆ? ವಿದ್ಯಾಭ್ಯಾಸ ಮಾಡಿಕೊಂಡು, ನಾನು ಮೊದಲೇ ನಿಮಗೆ ಸಂದೇಶ ಕಳುಹಿಸಿದ್ದಂತೆ, ಒಳ್ಳೆಯವರ ಆಶ್ರಯದಲ್ಲಿ  ಸುರಕ್ಷಿತವಾಗಿದ್ದಾನೆ." 

ಮೃದುವಾದ ಮಾತಿನಲ್ಲಿ  ಸಾಂತ್ವನ ನೀಡಿದ ಕ್ಷೇತ್ರ ಪಾಲೈಯ.

" ಆ ಮಗುವನ್ನ ಕುತ್ತಿಗೆ ಹಿಡಿದು ನೂಕಿದಂತೆ  ಮನೆಯಿಂದಾಚೆ  ಹಾಕಿದೆನಲ್ಲ ಎಂಬ ಪಾಪಪ್ರಜ್ಞೆ ನನ್ನನ್ನೂ ಒಮ್ಮೊಮೆ ಕಾಡುತ್ತದೆ. ಪಾಪ! ತಬ್ಬಲಿ! ರುಕ್ಮಿಣಿಗೆ  ಅದೆಷ್ಟು ಹಚ್ಚಿಕೊಂಡಿದ್ದ !"ನಿಟ್ಟುಸಿರು ಬಿಟ್ಟರು ನಂಜಪ್ಪೈಯನವರು.

  "ಆತ ನನ್ನನ್ನ  ಅಲ್ಲದಿದ್ದರೂ  ರುಕ್ಮಿಣಿಯನ್ನು ನೆನೆನೆನೆದು  ಅದೆಷ್ಟು ಕೊರಗುತ್ತಿದ್ದಾನೋ ಏನೋ?" ತನಗೆ ತಾನೇ ಮಾತನಾಡಿಕೊಳ್ಳುವವರಂತೆ  ಉಸುರಿದರು ನಂಜಪ್ಪೈಯನವರು.

"ಅದಕ್ಕೆಲ್ಲ ಅವನಿಗೆ ಪುರುಸೊತ್ತು ಎಲ್ಲಿದೆ ನಂಜಪ್ಪೈಯ ನವರೇ?"

ತಟ್ಟೆಂದು ಉತ್ತರಿಸಿಬಿಟ್ಟ  ಕ್ಷೇತ್ರ ಪಾಲೈಯ, ನಂಜಪ್ಪೈಯನವರ ಮುಖದಲ್ಲಿ ಕವಿದ ನಿರಾಶೆಯ ಛಾಯೆಯನ್ನು ಕಂಡು ಕೂಡಲೇ  ಮಾತಿನ ಧಾಟಿ  ತಿರುಗಿಸಿದ.

 " ಅವನಿನ್ನೂ ಅಂದು ನೀವು ಕಂಡ ಮಗುವೆಂದು ಭಾವಿಸಿದ್ದೀರ  ಗೆಳೆಯರೇ ? ವಿದ್ಯಾಭ್ಯಾಸ, ಮಲ್ಲ ಯುದ್ಧ, ಕುದುರೆ ಸವಾರಿ, ವ್ಯಾಯಾಮವೆಂದು ಅವನ ಸಮಯವೆಲ್ಲ ಹೊಸ ಹೊಸ ವಿದ್ಯೆ ಕಲಿಯುವುದರಲ್ಲೇ ಕಳೆಯುತ್ತಿದೆ ."




" ಕುದುರೆ ಸವಾರಿಯೇ? ಕೇಸರಿ ಸವಾರಿ ಮಾಡುತ್ತಾನೆಯೇ?" ಪೊನ್ನನ ಮುಖ ಆಶ್ಚರ್ಯದಲ್ಲಿ ಅರಳಿತು.


" ಹೂಂ! ಕೇಸರಿ ಈಗ ಕುದುರೆ ಸವಾರಿಯಲ್ಲಿ ನಿಪುಣನಾಗಿದ್ದಾನೆ.ನನ್ನ ಅಶ್ವ ಶಾಲೆಯಲ್ಲಿ ಹುಟ್ಟಿದ ಒಂದು ಕುದುರೆ ಈಗ ಅವನದ್ದಾಗಿದೆ."


" ನಿಮ್ಮ ಅಶ್ವ ಶಾಲೆಯಲ್ಲಿ ಮರಿಕುದುರೆಗಳೂ ಇವೆಯೇನು?"
ಬೆರಗಾಗಿ ಕಣ್ಣಗಲಿಸಿದ ಪೊನ್ನ.


" ಹುಂ ಮತ್ತೆ! ವಾರದ  ಹಿಂದೆ ಕೂಡ ನನ್ನ ಅಶ್ವ ಶಾಲೆಯಲ್ಲಿ ಒಂದು ಕುದುರೆ ಮರಿಯ ಜನನವಾಗಿದೆ. ಪ್ರತ್ಯೇಕವಾದ ಆರೈಕೆಗಾಗಿ ಇಲ್ಲೇ ಮನೆಯ ಹಿತ್ತಲಿನ ಲಾಯದಲ್ಲಿ ಇರಿಸಿದ್ದೇನೆ. ಹೋಗಿ ನೋಡು ಪೊನ್ನ."


ಪೊನ್ನ ಕುತೂಹಲದೊಡನೆ ಲಾಯದ ಕಡೆ ಹೊರಟ.


ನಂಜಪ್ಪೈಯನವರ ಮುಖದಲ್ಲಿ ಕವಿದಿದ್ದ ದುಃಖದ ಛಾಯೆ ಇನ್ನೂ ಅಗಲದಿರುವುದನ್ನು ಗಮನಿಸಿದ  ಕ್ಷೇತ್ರಪಾಲೈಯ .


"ನಂಜಪ್ಪೈಯನವರೆ ! ಕೇಸರಿ  ನೀಮ್ಮ ಗೂಡಲ್ಲಿ ಬೆಳೆದ  ಪುಟ್ಟ ಹಕ್ಕಿ! ಅವನು ನಿಮನ್ನು ಮರೆಯುವುದು ಸಾಧ್ಯವೇನು? ನಿಮ್ಮ ಮತ್ತು ರುಕ್ಮಿಣಿಯಮ್ಮಳ  ನೆನಪುಗಳನ್ನು ಮನದಾಳದಲ್ಲಿ ಹುದುಗಿಸಿಟ್ಟುಕೊಂಡಿದ್ದರೂ, ಆತ ಹೊರಗೆ ಯಾರ ಮುಂದೆಯೂ  ಅದನ್ನ ವ್ಯಕ್ತಪಡಿಸಿಕೊಳ್ಳುವುದಿಲ್ಲ. ಏನೇ ಆಗಿರಲಿ ಆತ ವಿಶ್ವನಾಥನ ಮಗನಲ್ಲವೇ ? ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕೂಡ ಆತ ದೃಡಶಾಲಿಯಾಗಿ ಪರಿವರ್ತಿಸಿದ್ದಾನೆ. ಹೇಗೂ ನೀವೇ ನೋಡುವುದರಲ್ಲಿದ್ದೀರಲ್ಲ. "

ಸ್ವಲ್ಪ ಸಮಾಧಾನವಾದಂತೆ ಕಂಡರೂ ನಂಜಪ್ಪೈಯನವರ ಮನದಲ್ಲಿ ಏನೋ ವ್ಯಾಕೂಲ.ಹೊಟ್ಟೆಯಲ್ಲಿ ವರ್ಣಿಸಲಾರದ ಸಂಕಟ.

 "ನೀವು ಸ್ನಾನ ಮುಗಿಸಿ ,ತಿಂಡಿ ತಿಂದು ಸ್ವಲ್ಪ ಆರಾಮವಾಗಿ ಮಲಗಿ. ನಂತರ ನಿಮ್ಮನ್ನು ಆಸ್ಥಾನ ಗಮಕಿಯ ಗೃಹಕ್ಕೆ ಕರೆದೊಯ್ಯುತ್ತೇನೆ.ನಿಮ್ಮ ಕೇಸರಿಯನ್ನ ಕಣ್ತುಂಬ ನೋಡುವಿರಂತೆ." ಉತ್ಸಾಹದಿಂದ ನುಡಿದ ಕ್ಷೇತ್ರಪಾಲೈಯ.

" ಕೇಸರಿಗೆ ಆಶ್ರಯ ನೀಡಿರುವ ಆ ತಾಯಿಯನ್ನು ಕಂಡು ವಂದಿಸ ಬೇಕು.ನೇರವಾಗಿ ರಾಜ ಗಮಕಿಯ ಮನೆಗೆ ತೆರಳೋಣವೆಂದರೆ ಪ್ರಯಾಣದ ಆಯಾಸ, ದಣಿವು, ಕೊಳಕಿನೊಡನೆ ಅಪರಿಚಿತರ ಮನೆಗೆ ಹೋಗಲು ಸಂಕೋಚವಾಯಿತು.ಆದರೆ ಕೂಡಲೇ ಆ ನನ್ನ ಕಂದನನ್ನು ಕಾಣುವ ಬಯಕೆಯ  ಒತ್ತಡವನ್ನು ತಾಳಲಾಗುತ್ತಿಲ್ಲ."
ನಂಜಪ್ಪೈಯನವರ ಕಣ್ಣುಗಳಲ್ಲಿ ಕಂಬನಿ ಮಿನುಗಿತು .

ಸ್ನಾನದ ಮನೆಯ ಕಡೆ  ನಡೆಯುತ್ತಿದ್ದ ಹಾಗೆ ತನ್ನ ಮೆಲ್ವಸ್ತ್ರದಿಂದ ಕಣ್ಣೊರೆಸಿ       ಕೊಂಡರು    ನಂಜಪ್ಪೈಯನವರು.

"ಕ್ಷೇತ್ರ ಪಾಲೈಯನವರೇ ! ನಾನು ಪಟ್ನಕ್ಕೆ ಬಂದು  ಸೇರುವುದರಲ್ಲಿ   ಏನೇನೊ ಕೆಟ್ಟ  ಸುದ್ಧಿಗಳನ್ನು  ಕೇಳಿಸಿಕೊಳ್ಳುವ ಅವಕಾಶಗಳು ಒದಗಿ ಬಂದವು.ನಾನು  ಕೇಳಿದ್ದೆಲ್ಲ ನಿಜವೇ?"


ಕ್ಷೇತ್ರಪಾಲೈಯನ ಮುಖವನ್ನು ದಿಟ್ಟಿಸುತ್ತ ಕೇಳಿದರು ನಂಜಪ್ಪೈಯನವರು 

" ಏನು ಸಮಾಚಾರ?ನೀವು ಆಗಮಿಸಿದಾಗಿನಿಂದ ಗಮನಿಸುತ್ತಿದ್ದೇನೆ. ನಿಮ್ಮ ಮನಸ್ಸಿನಲ್ಲಿ ಏನೋ ಚಂಚಲವಿರುವ ಹಾಗೆ ಕಾಣುತ್ತಿದೆ. ಅದೇನೆಂದು  ಮನ ಬಿಚ್ಚಿ ಹೇಳಿ ನಂಜಪ್ಪೈಯನವರೆ. "

ಹಂಡೆಯಲ್ಲಿದ್ದ ನೀರಿನ ಬಿಸಿಯನ್ನು ಶೋಧಿಸುತ್ತಲೇ ನುಡಿದ  ಕ್ಷೇತ್ರ ಪಾಲೈಯ,ಮತ್ತೊಂದು ಸೌದೆಯನ್ನು ನೀರೊಲೆಯೊಳಕ್ಕೆ ತೂರಿಸಿದ.

"ಇಲ್ಲಿಯ ರಾಜಕೀಯ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲವಂತೆ? ಸುಲ್ತಾನರ ಆಡಳಿತವೇ ಕೊನೆಗೊಳ್ಳುವ  ಅಪಾಯವಿದೆಯಂತೆ? ಪಟ್ನದಲ್ಲೇ ಪ್ರಜೆಗಳು ಸುರಕ್ಷಿತವಾಗಿಲ್ಲವಂತೆ? "



ನಂಜಪ್ಪೈಯನವರು ದನಿ ತಗ್ಗಿಸಿ ಗಂಭೀರವಾಗಿ  ನುಡಿದು, ಪ್ರಶ್ನಾರ್ಥವಾಗಿ ಕ್ಷೇತ್ರಪಾಲೈಯನನ್ನು  ದಿಟ್ಟಿಸಿದರು.

"ಎಲ್ಲ ಜನರೂ ಒಂದೇ  ರೀತಿ ಇರುವರೇ ಹೇಳಿ!ನೆಮ್ಮಧಿಯಾಗಿರುವ  ಪ್ರಜೆಗಳ  ಮಧ್ಯೆ ಭೀತಿ ಹರಡಿಸಲು ಕೆಲವು ದೇಶ ದ್ರೋಹಿಗಳು  ಬಾಯಿಗೆ ಬಂದದ್ದನ್ನ ಒದರುತ್ತಿರುತ್ತಾರೆ.ದುಷ್ಟರ ಇಂತಹ ಮಾತೆಲ್ಲ ಸಹಜವೇ ಅಲ್ಲವೇ ನಂಜಪ್ಪೈಯನವರೆ? ಅದನ್ನೆಲ್ಲ ಮನಸ್ಸಿಗೆ ಹಾಕಿಕೊಳ್ಳ ಬಾರದೆಂದು ನಿಮಗೂ ತಿಳಿಯದೆ? ನೀವೇಕೆ ಚಿಂತಿಸುವಿರಿ?"

" ಚಿಂತಿಸದೆ ಹೇಗೆ ಕ್ಷೇತ್ರ ಪಾಲೈಯನವರೆ? ಯಾವ ಕ್ಷಣದಲ್ಲಿಯೂ ಯುದ್ಧ ಸಿಡಿಯುವ ಸಂಭವವಿರುವ ಈ ಪಟ್ನದಲ್ಲಿ, ಒಬ್ಬ ತಂದೆ  ತನ್ನ ಮಗುವನ್ನು ಬಿಟ್ಟು  ಹೋಗುವುದಾದರೂ ಹೇಗೆ?"

" ಹಾಗಾದರೆ ಪೋನ್ನನಿಗೆ  ಇಲ್ಲಿ ನೌಕರಿ ಬೇಡವೆನ್ನುವಿರಾ ?ಆತನನ್ನು ಇಲ್ಲಿ  ಬಿಟ್ಟು ಹೋಗುವುದಿಲ್ಲವೇ?"

" ಇಲ್ಲ ಕ್ಷೇತ್ರಪಾಲೈಯನವರೆ.ಪೊನ್ನನನ್ನು  ಇಲ್ಲಿ ಬಿಟ್ಟು ಹೋಗುವ ಯೋಚನೆ ಇತ್ತು.ಆದರೆ ಇಲ್ಲಿಯ ಪರಿಸ್ಥಿತಿ  ನೋಡಿದ ಮೇಲೆ ನಾನು ಕೇಸರಿಯನ್ನೂ ಕೂಡ ಇಲ್ಲಿ ಬಿಟ್ಟು ಹೋಗಬಾರದೆಂಬ  ತೀರ್ಮಾನಕ್ಕೆ ಬಂದಿದ್ದೇನೆ ."


"ಹಾಗಾದರೆ ವಿಶ್ವನಾಥನ ಕನಸುಗಳು?"


" ಎಂದೋ ಸತ್ತವನ ಕನಸಿಗಾಗಿ ಇಂದು ನನ್ನ ಮಕ್ಕಳ ಪ್ರಾಣವನ್ನ ಒತ್ತೆ ಇಡಲು ನಾನು ಒಪ್ಪುವುದಿಲ್ಲ." ಗಂಭೀರವಾಗಿ  ತೀರ್ಮಾನವಾಗಿ ನುಡಿದರು ನಂಜಪ್ಪೈಯ.

ಸಿಡಿಲು ಬಡಿದವನಂತೆ ನಂಜಪ್ಪೈಯನವರನ್ನು ದಿಟ್ಟಿಸಿ ನೋಡಿದ   ಕ್ಷೇತ್ರಪಾಲೈಯ.


 ವರ್ಷಗಳ ಹಿಂದೆ ರುಕ್ಮಿಣಿಯಮ್ಮ ಗೋಗರೆದು ಆಡಿದ್ದ ಅದೇ ಮಾತುಗಳು!ಅಂದು ನಂಜಪ್ಪೈಯನವರ ನಿರ್ಧಾರವನ್ನು ಯಾವ ಬೇಡಿಕೆಯೂ ಕದಲಿಸಲಿಲ್ಲ.ಆದರೆ ಇಂದು? ಕಾಲ ಈ  ಕರ್ಮವೀರನ ಮನಸ್ಸನ್ನೂ ಮೃದುಗೊಳಿಸಿ ಬಿಟ್ಟಿತೇ?  


ಕೇಸರಿಯನ್ನು ಇವರು ಕರೆದೊಯ್ದರೆ ವಿಶ್ವನಾಥನಿಗೆ ಮಿತ್ರ ದ್ರೋಹ ಎಸಗಿದಂತೆ ಆಗುವುದಿಲ್ಲವೇ? ಮೇಲಾಗಿ ಇಂದು ಒಬ್ಬ ರಣಕೇಸರಿಯಾಗಿ ರೂಪಗೊಂಡಿರುವ   ಆ ಯುವಕನ    ಪರಿಶ್ರಮ, ಆತನ ಭವಿಷ್ಯ ಜೀವನ ಎಲ್ಲ  ವ್ಯರ್ಥವಾಗುವುದಿಲ್ಲವೇ ? 





ಚಿಂತಾಕ್ರಾಂತನಾಗಿ  ತನ್ನನ್ನರಿಯದೆ ಕುದಿಯುವ ನೀರಿಗೆ ಕೈ ಹಾಕಿದ ಕ್ಷೇತ್ರಪಾಲೈಯ "ಹಾಂ!" ಎಂದು ಚೀರಿದ! 

******************************************************

ಅದೇ ಸಮಯ, ಅನ್ನದಾನ ಶೆಟ್ಟರ ಛತ್ರದಲ್ಲಿ  ಕೇಸರಿಯ ಪರಿಸ್ಥಿತಿ ಅತೀತ ಗೊಂದಲಕ್ಕೊಳಗಾಗಿತ್ತು. 


 ಎಲುಬನ್ನು ಕಂಡ ಶ್ವಾನಗಳಂತೆ ಸಿಪಾಯಿಗಳೆಲ್ಲ ಗುಂಪಾಗಿ ಒಬ್ಬರ ಮೇಲೊಬ್ಬರು ಬಿದ್ದುಕೊಂಡು ಥೈಲಿಯನ್ನು ಕಸಿದಿಕೊಳ್ಳಲು  ಸುಲೋಚನಳ ಮೇಲೆರಗಿದ್ದರೂ, ಕೇಸರಿಯ ಹಿಂದೆ ಒಬ್ಬ ಸೇವಕನನ್ನು  ಕಾವಲಿರಿಸಲು  ಮರೆತಿರಲಿಲ್ಲ  ಸುಭಾನ್.


ಜಿಂಕೆಯಂತೆ ನಡುನಡುಕುತ್ತ ಥೈಲಿಯನ್ನು ಎತ್ತಿ ಹಿಡಿದಿದ್ದ ಸುಲೋಚನಳ ಬಳಿ  ಕವಿದಿದ್ದ ಸಿಪಾಯಿಗಳ ಗುಂಪನ್ನು ಸೀಳಿಕೊಂಡು ಮುನ್ನುಗ್ಗಿದ ಸುಭಾನ್. ತನ್ನ ಖಡ್ಗದ ತುದಿಯಿಂದ ಥೈಲಿಯನ್ನು ತನ್ನ ಬಳಿ ಸೆಳೆದುಕೊಂಡವ ಸಂತೋಷ ಮಿತಿಮೀರಿ  ಉದ್ವೇಕಗೊಂಡು ಗುಡುಗಿದ.


" ಆ ಚೊಕ್ರಾನನ್ನು ಇನ್ನೂ ಉಳಿಸಲಾರೆ ! ಎಂದಿದ್ದರೂ ಆತನಿಂದ ನನಗೆ ಗಂಡಾಂತರ  ತಪ್ಪಿದ್ದಲ್ಲ."


ಥೈಲಿಗಾಗಿ ಪರದಾಡುತ್ತ ಹಿಂಬಾಲಿಸಿದ ಪಾಂಡು ರಂಗಾಚಾರ್ಯರನ್ನೋ, 'ನಿಮಗೆ ಬೇಕಾದ  ಚೀಲ ಕೊಟ್ಟಿದ್ದೇನೆ. ಆ ಹುಡುಗನನ್ನು ಬಿಟ್ಟು ಬಿಡಿ'ಎಂದು ಪ್ರಲಾಪಿಸಿದ ಸುಲೋಚನಳನ್ನೋ ಲೆಕ್ಕಿಸದೆ ಧರ್ಪದಿಂದ ಕೇಸರಿಯ ಕಡೆ ಹೆಜ್ಜೆ ಹಾಕಿದ ಸುಭಾನ್.


ಕತ್ತಲು ಕಣ್ಣನ್ನು ಕಟ್ಟಿದಂತೆ ಭಾಸವಾಗಿ, ಮರುಕಳಿಸುತ್ತಿದ್ದ ಜ್ವರದಿಂದ ಮೈಯೆಲ್ಲಾ ಕಂಪಿಸುತ್ತಿರಲು,  ನಿಲ್ಲಲಾರದೆ ತೂರಾಡ ತೊಡಗಿದ  ಕೇಸರಿ.




ಅವನ ಮನಸ್ಸಲ್ಲಿ  ರುಕ್ಮಿಣಿಯಮ್ಮಳ ಚಿತ್ರ ಮಸುಕು ಮಸುಕಾಗಿ ಮೂಡಿಬಂದಿತು. ಅವಳು ಕೇಸರಿಯನ್ನು ಕುರಿತು ಕೈಗಳನ್ನು ಚಾಚಿ "ಬಾ ಕಂದ" ಎಂದು ಕರೆದ  ಹಾಗಾಯಿತು.

ಕೇಸರಿ  "ಅಮ್ಮಾ!" ಎಂದು ಬಿಕ್ಕಿದ.

*************************ಆಮೇಲೆ?**********************

Tuesday, December 13, 2011

Keerthi Nidhi Kesari Singha - 25

                   ಕೀರ್ತಿ ನಿಧಿ ಕೇಸರಿ ಸಿಂಘ 

ಧಾವಿಸುತ್ತಿದ್ದ  ಕುದುರೆಗಳ   ವಾಯು ವೇಗ -
ಅದಕ್ಕಿಂತ ಮಿಗಿಲಾಗಿದ್ದ    ಮನೋ ವೇಗ -
ಸರ ಸರನೆ ಹಬ್ಬಿ ಬೆಳೆದ  ಮನೋ ರಾಜ್ಯ -
ಅಲ್ಲಿ  ಹಿಗ್ಗಿ  ಮೆರೆಯುತ್ತಿದ್ದ   ರಾಜ್ಯದ ದಿವಾನ್ ? 
ಸುಭಾನ್ !


ಕನಸೆಂದರೆ ಕನಸು! ಅದೆಂತಹ ಕನಸು!
ಸುಭಾನನ ಕನಸಿನ ಕುದುರೆ ಧಾಪುಗಾಲು ಹಾಕಿ ದೌಡಾಯಿಸುತ್ತಿತ್ತು. ಮನಸ್ಸೋ ಚಡಪಡಿಸುತ್ತಿತ್ತು.ಇನ್ನೂ ಕೆಲವೇ ನಿಮಿಷಗಳ ನಾಗಾಲೋಟದಲ್ಲಿ ಛತ್ರ ಮುಟ್ಟಿಬಿಡಬಹುದು.

ಸಾಮ, ದಾನ, ಬೇಧ  , ದಂಡಗಳಲ್ಲಿ ಯಾವುದಾದರೂ ಒಂದು ಉಪಾಯವನ್ನು  - ಇಲ್ಲವೇ ಎಲ್ಲವನ್ನೂ ಕೂಡ - ಪ್ರಯೋಗಿಸಿ, ದೊರೆಗಳ ಕೈ ಸೇರ ಬೇಕಾಗಿದ್ದ ಪತ್ರಗಳನ್ನು ಪಾಂಡುರಂಗಾಚಾರ್ಯರಿಂದ ಕಸಿದು ಕೊಳ್ಳ ಬೇಕು. ಈಗಾಗಲೇ ಸುತಾಣು ಆ ಕೆಲಸವನ್ನು ಮಾಡಿ ಮುಗಿಸಿದ್ದರೆ ಆಶ್ಚರ್ಯವೇನಿಲ್ಲ.

ಸುತಾಣು ! ಚುರುಕಾದ ಹುಡುಗ ! ಬಲಿಷ್ಠ ಯುವಕ ! ತನ್ನ ಎಲ್ಲ ಕೆಲಸ ಕಾರ್ಯಗಳಿಗೂ ನೆರವಾಗಿ ನಿಂತ ಹುಡುಗ. 


ಸರದಾರ್ ಅಸ್ಲಾಮ್ ಜಾನನೊಡನೆ ಕಾಡು ದಾರಿಯಲ್ಲಿ ಪಯಣಿಸುತ್ತಿದ್ದಾಗ ಹೇಗಾದರೂ ಮಾಡಿ ತಾನು ಭವಾನಿ ನದಿ ತೀರದಲ್ಲಿ ಕಳೆದುಕೊಂಡಿದ್ದ ಪತ್ರವನ್ನು ಪತ್ತೆ ಹಚ್ಚಿ ಡಾನಾಯಕನ ಕೋಟೆಗೆ ತಲಪಿಸ  ಬೇಕೆಂದು ನಿರ್ಧರಿಸಿದ್ದ  ಸುಭಾನ್. ಆ ಕಾರ್ಯ ಸಾಧಿಸಲು ಸಾಹಸಿಯಾದ ಸುತಾಣುವಿಗಿಂತ ಹೆಚ್ಚು ಅರ್ಹರು ಇನ್ಯಾರಿರ ಬೇಕು ? ಪಟ್ನದಲ್ಲಿ  ಪ್ರಕಾಶವಾದ ಭವಿಷ್ಯವನ್ನು ಆತನಿಗಾಗಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ,ಆಶಾವಾದಿಯಾದ ಸುತಾಣುವನ್ನು  ಸರದಾರ್ ಅಸ್ಲಾಮ್ ಜಾನನೊಡನೆ ಪಯಣಿಸುತ್ತಿದ್ದ ತನ್ನನ್ನು  ಗುಟ್ಟಾಗಿ ಹಿಂಬಾಲಿಸುವಂತೆ ಆಜ್ನಾಪಿಸಿದ್ದ ಸುಭಾನ್.


ಪತ್ರದ ವಿಷಯದಲ್ಲಿ ತಾನು ಯಶಸ್ವಿಯಾಗದಿದ್ದರೂ, ಮತ್ತೊಂದು ಬಗೆಯಲ್ಲಿ  ತನ್ನ  ಯೋಚನೆ ಒಳ್ಳೆಯದನ್ನೇ ಮಾಡಿತ್ತು.


ತನ್ನನ್ನು ಬಂಧಿಸಲು ಹೊರಟ ಸರದಾರ್ ಅಸ್ಲಾಮ್ ಜಾನನಿಂದ  ತಪ್ಪಿಸಿಕೊಳ್ಳಲು ನದಿಗೆ ಹಾರಿ, ಕಬಿನಿ ನದಿಯ ಪ್ರವಾಹದಲ್ಲಿ ಮುಳುಗಿ ಸಾಯಲಿದ್ದ ತನ್ನನ್ನು ಅನಾಯಾಸವಾಗಿ ತೆಗೆದು ಹೊರ ಹಾಕಿ  ಕಾಪಾಡಿದ್ದ ಮುಳುಗುಗಾರಿಕೆಯನ್ನು ತೀವ್ರವಾಗಿ ಅಭ್ಯಸಿಸಿದ್ದ   ಸುತಾಣು. ತನ್ನಂತೆಯೇ ಆತನೂ ತಲೆ ಮರೆಸಿಕೊಂಡಿರ ಬೇಕಾಗಿದ್ದ ಪರಿಸ್ಥಿತಿ ಒದಗಿಬಂದಾಗಲೂ ಆತ ಹಿಂಜರಿಯಲಿಲ್ಲ.ಅದಕ್ಕೆಲ್ಲ  ಪ್ರತ್ಯುಪಕಾರವಾಗಿ ಆ ಹುಡುಗನಿಗೆ  ವೆಂಕಟರಾವ್ ಅವರ ಸೇವೆ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟಿದ್ದ  ಸುಭಾನ್. 



ಆದರೆ ವೆಂಕಟರಾವ್ ಶುದ್ಧ ಜಿಪುಣರು. ಎಷ್ಟೋ  ವಿಶ್ವಾಸವಾಗಿ ನಡೆದುಕೊಂಡಿದ್ದರೂ ಸುತಾಣು ಅವರಿಂದ ಇನ್ನೂ ಯಾವ ಲಾಭವನ್ನೂ ಪಡೆದುಕೊಂಡಿಲ್ಲ. ತನ್ನ ಆಕಾ ಮತ್ತು ಸುತಾಣುರವರ ಮಿಲನವಾದಲ್ಲಿ  ಅದು ಅವರಿಬ್ಬರಿಗೂ ಲಾಭಕರವಾಗ ಬಹುದೆನ್ನಿಸಿತ್ತು. ಅದಕ್ಕಾಗಿಯೇ ಆತನನ್ನು ತಾನೂ ಆಕಾರವರೂ ಗುಟ್ಟಾಗಿ ಭೇಟಿಯಾಗಲು ನಿರ್ಧರಿಸಿದ್ದ   ಸ್ಥಳಕ್ಕೆ  ಬರಲು  ಆಜ್ಞಾಪಿಸಿದ್ದ ಸುಭಾನ್. 

ಪಾಂಡು ರಂಗಾಚಾರ್ಯರ ಬಗ್ಗೆ  ಸುದ್ದಿ ಹೊತ್ತು ಬರಬೇಕಿದ್ದ ಸುತಾಣು ಏಕೋ ಏನೋ ಕಾಣಿಸಿಕೊಳ್ಳಲೇ ಇಲ್ಲ. ಆಕಾರವರ ಚುಚ್ಚು  ಮಾತುಗಳು ತನಗೆ ಸುತಾಣುವಿನ ಮೇಲೆ   ಕಿರಿಕಿರಿಯನ್ನು ಉಂಟು ಮಾಡಿದ್ದರೂ, ನಿಧಾನವಾಗಿ ಯೋಚಿಸಿದಾಗ  ಆತನ  ಗೈರು ಹಾಜರಿಗೆ ಅನಿವಾರ್ಯ ಕಾರಣವಿದ್ದಿರ ಬೇಕು ಎನ್ನಿಸಿತು. ಕೋಟೆಯ  ದ್ವಾರಪಾಲಕನ ಪ್ರಕಾರ ಆತ ಆಚಾರ್ಯರನ್ನು ಹಿಂಬಾಲಿಸಿರುವುದು ಸ್ಪಷ್ಟವಾಗಿದೆ . ಅಂದಮೇಲೆ ....?

ಸುತಾಣುವಿನ ಬಗ್ಗೆ ತಾನು ಹಾಕಿಕೊಂಡಿರುವ ಲೆಕ್ಕಾಚಾರ ಸರಿ ಇದ್ದಲ್ಲಿ ,ಆತ ಈಗಾಗಲೇ  ಅನ್ನದಾನ   ಶೆಟ್ಟರ ಛತ್ರದಲ್ಲಿ ಹಾಜರಿಯಾಗಿರ ಬೇಕು . ಪತ್ರವನ್ನೂ ಕೂಡ ಕಸಿದುಕೊಂಡಿರ  ಬೇಕು.ಇಷ್ಟಕ್ಕೂ ಎಳ್ಳು ಎನ್ನುವ  ಮುನ್ನವೇ  ಎಣ್ಣೆಯೊಡನೆ ಬಂದು ನಿಲ್ಲುವವನಲ್ಲವೇ ಸುತಾಣು ?

 ಆದರೆ ಆಚಾರ್ಯರೊಡನೆ ಒಂದು ಪುಟ್ಟ ಸಿಪಾಹಿಗಳ ತಂಡವೂ ಪಯಣಿಸಿದೆಯಲ್ಲ? ಸುತಾಣು ಗುಟ್ಟಾಗಿ ಕಾರ್ಯ ಸಾಧಿಸಿರುವನೋ? ಇಲ್ಲ ಪುಟ್ಟ ಕಾಳಗಕ್ಕೆ  ತೊಡಗಿರುವನೋ? 

ಸುಭಾನನ ಕುತೂಹಲ ಹೆಚ್ಚಿದಂತೆ, ಏನೇ ಆಗಿರಲಿ, ತಾನು ದುರಿತವಾಗಿ ಹೋಗಿ   ಸುತಾಣುವಿಗೆ ನೆರವಾಗ ಬೇಕೆಂಬ ಉದ್ವೇಕವೂ ಹೆಚ್ಚಿತು. ತನ್ನ ಕುದುರೆಯ ವೇಗವನ್ನು ಇನ್ನೂ ಹೆಚ್ಚಿಸುವುದರ ಸಲುವಾಗಿ ತನ್ನ ಕಾಲುಗಳಿಂದ ತಾನು ಆಸೀನನಾಗಿದ್ದ ಕುದುರೆಯ ಹೊಟ್ಟೆಯ ಎರಡು ಪಕ್ಕಗಳನ್ನೂ ಬಲವಾಗಿ ತಿವಿದ ಸುಭಾನ್.

ಸುಭಾನನನ್ನು  ಹಿಂಬಾಲಿಸುತ್ತಿದ್ದ ಸಿಪಾಯಿಗಳೂ ಆತನನ್ನು  ಅನುಸರಿಸಿ ತತ್ತಮ್ಮ ಕುದುರೆಗಳನ್ನು ವೇಗವಾಗಿ ಚಲಿಸಿದರು. 


******************************************************
ಸುಲೋಚನಳೂ ಗಂಗಾಧರನೂ ಎಲ್ಲೆಡೆ ಮಿಕಮಿಕ ಕಣ್ಣು ಹೊರಳಿಸುತ್ತ ನಿಂತರು.
ನೀರನ್ನು ಚೆಲ್ಲಿಕೊಂಡು ಪಕ್ಕಕ್ಕೆ ಉರುಳಿದ್ದ ಬಿಂದಿಗೆ -
 ನೆಲದ ಮೇಲೆ ಬಿದ್ದುಕೊಂಡು ನರಳುತ್ತಿದ್ದ ವೀರರು -
ಅಯ್ಯೋ ! ಇದೇನು ರಾದ್ದಾಂತ ?

 ಕೈ ಕೊಟ್ಟು ಎಬ್ಬಿಸಲು ಹೋದವರನ್ನು ಲಕ್ಷಿಸದೆ,  ಹಿಡಿ ಶಾಪವನ್ನು ಉಸಿರುತ್ತಲೇ ತಾವಾಗಿಯೇ  ಎದ್ದು ತತ್ತಮ್ಮ ಮೈ ಎಳೆದುಕೊಂಡು  ಹೊರಕ್ಕೆ ನಡೆದರು ಆ  ವೀರರು.

ಹೊರಗಡೆ ನೋಡಿದರೋ   ಗಲಭೆಯೋ ಗಲಭೆ  !

ಅಂಜುತ್ತಲೇ  ಹೊರಗೆ  ಇಣುಕಿದ  ಸುಲೋಚನ ಮತ್ತು ಗಂಗಾಧರ  ದಿಗ್ಬ್ರಾಂತರಾದರು.


ಖಡ್ಗ ಹಿಡಿದು ಚಿಗುರೆಯಂತೆ ಓಡುತ್ತಿದ್ದ ಆ  ಹುಡುಗ -
 ಅವನನ್ನು ಅಟ್ಟಿಸಿಕೊಂಡು ಹೋದ ಇತರ ವೀರರು -
 "ಹಿಡಿಯಿರೋ ಅವನನ್ನು.."ಎಂದು ಅಬ್ಬರಿಸುತ್ತ ತನ್ನ ವೃದ್ಧ ದೇಹವನ್ನು ಹೊತ್ತು ಅವರುಗಳ ಹಿಂದೆ  ಓಡುತ್ತಿದ್ದ  ಗಣ್ಯ  ಅತಿಥಿಗಳು -
 ತಮ್ಮಿಬ್ಬರನ್ನೂ ಪಕ್ಕಕ್ಕೆ ನೂಕಿ ತಾವೂ ಆ ಹುಡುಗನನ್ನು ಹಿಡಿಯುವ  ಆತುರದಲ್ಲಿ ಓಡಲು ಎತ್ನಿಸಿದ ಗಾಯಾಳುಗಳು -

ಏನು ತಾನೇ ನಡೆಯುತ್ತಿದೆ ಇಲ್ಲಿ ?
 ಗಂಗಾಧರನನ್ನು ಕುರಿತು ಪ್ರಶ್ನಾರ್ಥವಾಗಿ ನೋಟ ಬೀರಿದಳು ಸುಲೋಚನ.  ಇಷ್ಟು ಮಂದಿ ದಾಂಡಿಗರು ಸೇರಿಕೊಂಡು ಆ ಪುಟ್ಟ ಹುಡುಗನನ್ನ ಅದೇಕೆ ಹೀಗೆ ಸತಾಯಿಸುತ್ತಿರುವರು?ಜ್ವರದಿಂದ ಬಳಲಿ,ಬಲಹೀನ ಸ್ಥಿತಿಯಲ್ಲಿರುವ   ಹುಡುಗನನ್ನು  ಈ ರಣ ಬಿಸಿಲಿನಲ್ಲಿ ಹೀಗೆ ಪೀಡಿಸಿದರೆ  ಜ್ವರ ಮರುಕಳಿಸಿ ಬಿಡುವುದಿಲ್ಲವೇ ?

ಸುಲೋಚನಳಿಗೆ ಸಂಕಟದಿಂದ ತನ್ನ  ಕರುಳು ಕಿತ್ತುಬಂದಂತಾಯಿತು.

ನೋಡ ನೋಡುತ್ತಿದ್ದ ಹಾಗೆಯೇ  ಹುಡುಗ ಯಾರ ಕೈಗೂ ಸಿಕ್ಕಿಕೊಳ್ಳದೆ ಆಟ ತೋರಿಸುತ್ತಿರುವುದು ಅವಳಿಗೆ ಆಶ್ಚರ್ಯವನ್ನುಂಟು ಮಾಡಿತು.

 ಒಮ್ಮೆ ಹಾರಿದ, ಒಮ್ಮೆ ಬಾಗಿದ !
ಮಗದೊಮ್ಮೆ ಯಾರೂ ತನ್ನ ಹತ್ತಿರ ಸುಳಿಯದ ಹಾಗೆ ಖಡ್ಗದಿಂದ ಅಡ್ಡಗಟ್ಟಿದ!


 ಗಂಗಾಧರನಿಗೋ ಹೊಟ್ಟೆಯಲ್ಲಿ ಹುಳಿ ಹಿಂಡಿದಂತಾಯಿತು. ತಾನು ಗಣ್ಯವ್ಯಕ್ತಿ ಎಂದುಕೊಂಡಿದ್ದ ಮಹಾನುಭಾವರು ತನ್ನ ಮುಂದೆ ಜಣ ಜಣಿಸಿದ ನಾಣ್ಯಗಳಿಗೆ ಮರುಳಾಗಿ, ಅವರಿಗೆ  ಛತ್ರದಲ್ಲಿ  ಆಶ್ರಯ ಆತೀಥ್ಯ ನೀಡಿದ್ದು   ಇಷ್ಟು ವಿಪರೀತಗಳಿಗೆ ಕಾರಣವಾಯಿತಲ್ಲ! 

ಒಮ್ಮೆಲೇ ಆ  ಪ್ರಶಾಂತವಾದ ವಾತಾವರಣ ಅಲ್ಲೋಲಕಲ್ಲೋಲವಾಗಿ ಬಿಟ್ಟಿದ್ದು ಕಂಡು ಛತ್ರದ ದಂಪತಿಗಳಿಗೆ ಆಘಾತ ಉಂಟಾಯಿತು. ಇಂತಹ ಸಂದರ್ಭದಲ್ಲಿ  
ಏನು ಮಾಡಲೂ ಅರಿಯದವರಾಗಿ,ಮರಗಟ್ಟಿ ಮೂಲೆಯಲ್ಲಿ ಅಡಗಿ ನಿಂತರು ಸುಲೋಚನ ಮತ್ತು ಗಂಗಾಧರ.

******************************************************
ಕೇಸರಿಯ ಮುಖ ಕೆಂಪೇರಿ ದಗ ದಗ ಬಿಸಿಯಾಗುತ್ತಿದ್ದರೂ -
ಚಿಮ್ಮಿ, ನೆಗೆದು, ಬಾಗಿ, ಬಳುಕಿ, ಸಿಡಿದು,ಸೆಟೆದು ಎದುರಾಳಿಗಳಿಂದ ತಪ್ಪಿಸಿಕೊಳ್ಳಲು  ಅವನು ಮಾಡುತ್ತಿದ್ದ  ಸಾಹಸಗಳು, ಆತನೂ ಕೂಡ ಆ ಕಿಲ್ಲಾಡಿಗಳಿಗೆ ಸರಿ ಸಾಟಿಯಾದ ಕಿಲ್ಲಾಡಿಯೇ ಎಂಬುದನ್ನು ಸಾರುತ್ತಿದ್ದವು.

ಒಂದು ಕಡೆ ಸಿಪಾಯಿಗಳಿಗೆ ಆಟ ತೋರುತ್ತಿದ್ದರೂ, ಇನ್ನೊಂದೆಡೆ ತಾನು ತಪ್ಪಿಸಿಕೊಳ್ಳುವ ಮಾರ್ಗ ಹುಡುಕುತ್ತಿದ್ದರೂ, ಆತನ ದೃಷ್ಟಿ ದೂರದಲ್ಲಿ ಕಂಡು ಬಂದ ಕುದುರೆ  ಸವಾರರ ಕಡೆಯೂ ಆಗೊಮ್ಮೆ ಈಗೊಮ್ಮೆ  ಹಾಯುತ್ತಲೇ ಇತ್ತು. ಯಾರಿರ ಬಹುದು? ಮಿತ್ರರೋ ? ವೈರಿಗಳೋ?


 ಯಾರಾದರೇನು? ಇದೀಗ ತನಗಿರುವುದು ಒಂದೇ  ಗುರಿ.  ಹೇಗಾದರೂ ಮಾಡಿ ಚಾತುರ್ಯದಿಂದ, ಕಸಿದುಕೊಂಡಿರುವ  ಥೈಲಿಯನ್ನು ಭದ್ರವಾಗಿ ತಕ್ಕವರ ಕೈಗೆ ಸೇರಿಸಿ ಬಿಡ  ಬೇಕು.

ಕುದುರೆಸವಾರರು  ಸಮೀಪಿಸಿದಂತೆ  ಕೇಸರಿಯನ್ನ ಹಿಡಿಯಲು ಹೊರಟಿದ್ದ ಸಿಪಾಯಿಗಳೆಲ್ಲ ಚಕಿತರಾಗಿ, ಕಣ್ಣಗಲಿಸಿ ನೋಡುತ್ತಾ ಅಲ್ಲಲ್ಲೇ ನಿಂತರು.

 ಸುಲ್ತಾನರವರ ಪಡೆ  ವೀರರು! ತಮ್ಮ ಗತಿ ಇರಲಿ, ಈಗ  ಪಾಂಡು ರಂಗಾಚಾರ್ಯರ ಗತಿಯೂ ಅದೋಗತಿಯೇ ?

  ಶಿವನಾಯಕನ ಸೇವಕರ  ಮನಗಳಲ್ಲಿಯೂ   ಅಂಜಿಕೆ! ಅನುಮಾನ! ಇವರೆಲ್ಲ  ರಣ ವಿದ್ಯಾಪಾರಂಗತರು. ಶಿಸ್ತಿನ ತರಬೇತಿ ಹೊಂದಿರುವ  ಸುಲ್ತಾನರ ಸೇನಾ 
ವೀರರು.ತಮಗಿಂತ ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವ ಅವರೊಡನೆ ಕಾದಾಡಲು  ತಮ್ಮಿಂದ ಸಾಧ್ಯವೇ ? ಅದರಲ್ಲೂ ಈ ಪಿಳ್ಳೆಯಿಂದ ಪೆಟ್ಟು ತಿಂದು ನರಳುತ್ತಿರುವ ಈ ಸ್ಥಿತಿಯಲ್ಲಿ ?


ನಿಧಾನವಾಗಿ ತಪ್ಪಿಸಿಕೊಂಡು ಬಿಡುವುದೇ ಉತ್ತಮ್ವೋ ಎನ್ನಿಸಿ,ಒಬ್ಬರನ್ನೊಬ್ಬರು ನೋಡಿಕೊಂಡರು.ಹಿಮ್ಮೆಟ್ಟಲೂ  ಸಿದ್ಧರಾದರು  ಶಿವನಾಯಕನ ಸೇವಕರು.

" ಸುಭಾನ್ ! ತಕ್ಕ ಸಮಯಕ್ಕೆ ನಿನ್ನನ್ನ ಇಲ್ಲಿಗೆ ಕಳುಹಿಸಿಕೊಟ್ಟಿರುವ   ವೆಂಕಟರಾವ್ ಅವರ ದೂರದೃಷ್ಟಿಗೆ ಏನನ್ನ ಬೇಕು  ! ನೋಡಿಲ್ಲಿ ಶಿವ ನಾಯಕನ ಕಡೆಯಿಂದ ಪತ್ರ ಕದಿಯಲು ಬಂದ ಕದೀಮರನ್ನ ! ಮತ್ತೊಂದು ಕಡೆ ಈ ದ್ರೋಹಿ  ಕೇಸರೀ ! ನನ್ನ ಪತ್ರದ ಥೈಲಿ ಅಪಹರಿಸಿರುವ."



ಪಾಂಡು ರಂಗಾಚಾರ್ಯರು ಏದುಸಿರು  ಬಿಡುತ್ತ, ಸುಲ್ತಾನರ ಸೈನ್ಯದವರಂತೆ  ಸಮ ವಸ್ತ್ರ ಧರಿಸಿದ್ದ  ಸುಭಾನನನ್ನು ಸಮೀಪಿಸಿ ದೂರು ಕೊಟ್ಟರು .

ಸುಭಾನನ ಹೃದಯ 'ದಸಕ್' ಎಂದಿತು . 

ಶಿವನಾಯಕನೂ ವೆಂಕಟರಾವ್ ಅವರಿಗೆ   ತಿರುಗಿ ಬಿದ್ದನೇ ! ! ಆದರೆ ಇದು ಒಂದು ರೀತಿ ನಿರೀಕ್ಷಿಸಿದ್ದ ಸಂಗತಿಯೇ ಆಗಿತ್ತು  ! ಆದರೆ ಈ ಕೇಸರಿ ? ಎಲ್ಲಿಂದ ಯಾತಕ್ಕಾಗಿ ಇಲ್ಲಿ ಪ್ರತ್ಯಕ್ಷನಾಗಿರುವ ?! 

ಇವನಿಂದಾಗಿಯೇ ಅಲ್ಲವೇ ತಾನು ರಾಜದ್ರೋಹಿ ಎಂಬ ಪಟ್ಟ ಕಟ್ಟಿಸಿ ಕೊಂಡಿರುವುದು ?
ಇವನಿಂದಾಗಿಯೇ ಅಲ್ಲವೇ ತಾನು ತಲೆ ಮರೆಸಿಕೊಂಡು ಅಜ್ಞಾತವಾಸ ಮಾಡುತ್ತಿರುವುದು ?
ಇದೀಗ ಇವನ ಕಣ್ಣಿಗೆ ತಾನು ಬಿದ್ದಾಯಿತು.ಇನ್ನೂ ಸರದಾರ್ ಅಸ್ಲಾಮ್ ಜಾನನಿಗೂ  ತನ್ನ ವಿಷಯ ತಿಳಿದ ಹಾಗೆಯೇ.
ಸುಭಾನನಿಗೆ ತನ್ನ ಕನಸಿನ ಕೋಟೆಯ ಅಡಿಪಾಯವೆ  ಅಲ್ಲಾಡಿದಂತೆ  ಅನ್ನಿಸಿತು.

" ಏ ! ಶೈತಾನ್ ! ಸರಕಾರೀ ವ್ಯವಹಾರಗಳಲ್ಲಿ  ತಲೆ ಹಾಕುವ ಹವ್ಯಾಸ ಇನ್ನೂ ಬಿಟ್ಟಿಲ್ಲವೇ ನೀನು ? "
ಹಲ್ಲು ಮಸೆಯುತ್ತಾ ಕುದುರೆಯಿಂದ ಜಿಗಿದಿಳಿದ ಸುಭಾನ್. 

ಕೇಸರಿಯನ್ನು ಕಂಡು ಸುಭಾನನಿಗೆ ಆಘಾತವಾದಂತೆ, ಸುಭಾನನನ್ನು ಕಂಡು ಕೇಸರಿಯ ಮನಸ್ಸೂ ತಲ್ಲಣಕ್ಕೊಳಗಾಯಿತು. ಗೋವಿಂದ ರಾಜುವಿನ ಮೂಲಕ ಸುಭಾನ್ ಜೀವಂತ ಇರುವ ವಿಷಯವನ್ನು  ಅರಿತಿದ್ದರೂ, ಆತನನ್ನು ಪ್ರತ್ಯಕ್ಷವಾಗಿ ಎದುರಲ್ಲಿ ಕಂಡಾಗ,ಕೇಸರಿಗೆ ತಾನು ಆತನಿಂದ ಅನುಭವಿಸಿದ್ದ ಭಯ, ಯಾತನೆಗಳೆಲ್ಲವೂ  ಮನದಲ್ಲಿ ಒಮ್ಮೆ  ಮಿಂಚಿ ಮರೆಯಾದವು . 

  "ಯಾವ ಸರಕಾರದ ವ್ಯವಹಾರ? ಖುದಾದತ್ ಸರಕಾರದ್ದೋ  ಇಲ್ಲ ಕಂಪೆನಿ   
ಸರಕಾರದ್ದೋ? ವೆಂಕಟರಾವ್ ಅವರ ಸರಕಾರದ್ದೋ ಇಲ್ಲ ಶಿವ ನಾಯಕನ ಸರಕಾರದ್ದೋ ? ಇದ್ಯಾವ ಸರಕಾರವೂ ಇಲ್ಲವೆಂದರೆ ...."


ಕೇಸರಿಗೆ ಎಲ್ಲಿಂದ ತಾನೇ ಅಷ್ಟು ಮೊಂಡು ಧೈರ್ಯ ಬಂದಿತೋ? ಎದೆಯುಬ್ಬಿಸಿ ನಿಂತು  ಗಡುಸಾದ ದನಿಯಲ್ಲಿ ಆತ ಎಸೆದ  ಪ್ರಶ್ನೆಗಳು ಸುಭಾನನ ತಲೆಯ ಮೇಲೆ ಸಿಡಿಲೆರಗಿದಂತೆ ಎರಗಿದವು.


ಸುಭಾನನ ಎದೆ ಡವಡವ ಹೊಡೆದುಕೊಂಡಿತು.


ಎಲ್ಲ ಬಲ್ಲವನಂತೆ ಮಾತನಾಡುತ್ತಿರುವನಲ್ಲ  ! ಈ ಚೋಕರ  ಇನ್ನು ಏನನ್ನೆಲ್ಲ ಅರಿತಿರ ಬಹುದು ? ಎಷ್ಟರ ಮಟ್ಟಿಗೆ ಅರಿತಿರಬಹುದು ? ತನ್ನ ಆಕಾರ ಬಗ್ಗೆಯೂ  ಆತನಿಗೆ ತಿಳಿದಿರ ಬಹುದೇ? ತನ್ನ  ಗುಟ್ಟನ್ನೂ ಆತ ಬಹಿರಂಗ ಪಡಿಸುವ ಮುನ್ನ ಆತನ ಬಾಯಿಗೆ ಬೀಗ ಹಾಕ ಬೇಕು!


" ಏ! ಚುಪ್! ಸಾಕು ಮಾಡು ನಿನ್ನ ಅಧಿಕ ಪ್ರಸಂಗ. ವಿದ್ಯಾಭ್ಯಾಸ ಮಾಡಿಕೊಂಡು, ಆ ಗಮಕಿಗೆ ಶ್ರುತಿ ಹಾಕಿಕೊಂಡು ಬಿದ್ದಿರುವುದು ಬಿಟ್ಟು, ಯೋಧರ  ವ್ಯವಹಾರಗಳಲ್ಲಿ ತಲೆ ಹಾಕಲು  ನೀನು ಯಾವ ಮಹಾ ವೀರನೋ  ?"


"ದೇಶ ದ್ರೋಹಿಗಳೂ, ಸ್ವಾಮಿ ನಿಷ್ಠೆ ಇಲ್ಲದವರೂ ಮಾತ್ರವೇ ವೀರರೆಂದರೆ, ನಾನು ವೀರನೇ ಅಲ್ಲ.ಒಪ್ಪಿಕ್ಕೊಳ್ಳುತ್ತೇನೆ."


" ಸುಭಾನ್ ! ಇವನೊಡನೆ ಯಾಕೆ  ವಾಗ್ವಾದ?ಮೊದಲು ಪತ್ರದ ಥೈಲಿಯನ್ನ ಅವನಿಂದ  ಕಿತ್ತು ನನ್ನ ಕೈಗೆ ಕೊಡು. ನಾನು ಕೂಡಲೇ ಪ್ರಯಾಣ ಬೆಳೆಸ ಬೇಕು." ಬೇಸರದಿಂದ ಚಡಪಡಿಸಿದರು ಪಾಂಡುರಂಗಾಚಾರ್ಯರು.


"ಏನೂ ಚಿಂತೆ ಮಾಡ ಬೇಡಿ ಆಚಾರ್ಯರೇ! ಈತನನ್ನು ಸೊಳ್ಳೆ ಹೊಡೆಯೋ ಹಾಗೆ ಹೊಡೆದು ಹಾಕಿ,ಪತ್ರದ ಥೈಲಿಯನ್ನು ನಾನು ತೆಗೆದುಕೊಳ್ಳುವೆ.ನಾನೇ ಅದನ್ನ ನಿಮಗಿಂತ ಶೀಘ್ರವಾಗಿ  ಪಯಣಿಸಿ ದೊರೆಗಳಿಗೆ ಸಮರ್ಪಿಸುವೆ."


ಸುಭಾನ್ ಕ್ರೂರವಾಗಿ ನಗುತ್ತ ಕೇಸರಿಯ ಬಳಿ ಹೆಜ್ಜೆಯಿಟ್ಟನು.


ಪಾಂಡು ರಂಗಾಚಾರ್ಯರು ಕಣ್ಣು ಬಾಯಿ ಬಿಟ್ಟು ನಿಂತರು.


"ಏ ಸುಭಾನ್! ಏನು ಹೇಳುತ್ತಿರುವೆ?ವೆಂಕಟರಾವ್ ಅವರ  ರಾಯಭಾರಿ  ನಾನೇ ಅಲ್ಲವೇ ?"


ಸುಭಾನ್ ಆಚಾರ್ಯರನ್ನು ಲೆಕ್ಕಿಸದೆ ಕೇಸರಿಯ ಕಡೆ ಇನ್ನೊಂದು ಹೆಜ್ಜೆಯಿಟ್ಟ.


" ಕೇಸರಿ! ಮರ್ಯಾದೆಯಿಂದ ಥೈಲಿಯನ್ನ  ಕೊಟ್ಟುಬಿಡು.ಇಲ್ಲದಿದ್ದರೆ..." 


" ನಿಲ್ಲಿ! ಈ ಥೈಲಿಯೇ ನೋಡಿ! ತೆಗೆದುಕೊಂಡುಹೋಗಿ! ಆ ಮಗುವನ್ನು ಬಿಟ್ಟು ಬಿಡಿ!"


ಸುಭಾನ್ ಮತ್ತೊಂದು ಹೆಜ್ಜೆ ಇಡುವ ಮುನ್ನ ಸುಲೋಚನ ಗಟ್ಟಿಯಾಗಿ ಕಿರುಚಿದಳು.ಅವಳ ಎತ್ತಿ ಹಿಡಿದ ಕೈಯಲ್ಲಿ ಪಾಂಡು ರಂಗಾಚಾರ್ಯರ ಪತ್ರದ ಥೈಲಿ ಜೋತಾಡುತ್ತಿತ್ತು !






ಕೇಸರಿ ತನ್ನನ್ನರಿಯದೆಯೇ"ಅಯ್ಯೋ!"ಎಂದು ಉದ್ಗರಿಸಿದ!


******************ಆಮೇಲೆ ?*****************************

Tuesday, October 25, 2011

Keerthi Nidhi Kesari Singha

ಕೀರ್ತಿ ನಿಧಿ ಕೇಸರಿ ಸಿಂಘ







 ಎಲ್ಲರಿಗೂ ಹಾರ್ದಿಕ ದೀಪಾವಳಿ ಶುಭಾಶಯಗಳು. 

ಹಬ್ಬದ ನಂತರ , ಕೇಸರಿ ಸಿಂಘನ ಕಥೆ ಮುಂದುವರಿಯುವುದು.

Tuesday, September 13, 2011

Keerthi Nidhi Kesari Singha - 24

                                               ಕೀರ್ತಿ ನಿಧಿ ಕೇಸರಿ ಸಿಂಘ 

ವಿವಿಧ ಗಾತ್ರದ ಬಂಡೆಯುಂಡೆಗಳನ್ನು ಜೋಡಿಸಿಟ್ಟಂತಹ ಗುಡ್ಡಗಳ ಸಾಲು -
ಹೆದ್ದಾರಿಯಿಂದ ಕವಲೊಡೆದು  ಪಕ್ಕದಿಂದೆದ್ದ ಗುಡ್ಡವನ್ನು ಸೀಳಿಕೊಂಡು  ಮೇಲೇರಿ ಹಾದಿದ್ದ ಮಣ್ಣು ದಾರಿ -


ಗುಡ್ಡದ ಹಿಂಬಾಗದಲ್ಲಿದ್ದ ತಗ್ಗಿನಲ್ಲಿ ತಿಳಿ ನೀಲಿಯ ತಣ್ಣೀರಿನಲೆಗಳು ನೆಗೆದು ಕುಣಿಯುತ್ತಿದ್ದ ಕೆರೆ -
ಸುತ್ತಲೂ ಮತ್ತೆ ಬಂಡೆಯುಂಡೆಗಳಿಂದಾದ ಗುಡ್ಡಗಳು -


ಗುಡ್ಡದೊಳಗೆ ಹುದುಗಿಸಿಟ್ಟಂತೆ ಕಂಡ ಆ ಛತ್ರವನ್ನು
ಬಹುಪಾಲು  ಹೆಬ್ಬಂಡೆಗಳನ್ನೇ ಗೋಡೆಗಳಾಗಿಯೂ ಛಾವಣಿಯಾಗಿಯೂ ಜಾಣ್ಮೆಯಿಂದ ಉಪಯೋಗಿಸಿ ಬಡ ಯಾತ್ರಿಕರಿಗಾಗಿ  ಕಟ್ಟಿಸಿದ್ದರು ಅನ್ನದಾನ ಶೆಟ್ಟರು.

ಅಕ್ಕಪಕ್ಕದ ಗುಡಿಗಳ ಜಾತ್ರೆಯ ಸಮಯದಲ್ಲಿ  ಮಾತ್ರ  ಯಾತ್ರಿಕರಿಂದ ತುಂಬಿರುತ್ತಿದ್ದ ಆ ಛತ್ರ ಅಂದು ಒಬ್ಬ ಧನಿಕರಿಗೂ ಅವರೊಡನೆ ಆಗಮಿಸಿದ್ದ ನಾಲ್ಕು ಕುದುರೆ ಸವಾರರಿಗೂ  ಆತಿಥ್ಯ ನೀಡಿತ್ತು.

ಛತ್ರದ ಪಾರುಪತ್ಯಗಾರನಾದ ಗಂಗಾಧರನಿಗೆ ಒಂದು ಕಡೆ ವಿಸ್ಮಯವಾದರೆ ಮತ್ತೊಂದು ಕಡೆ ಖುಷಿಯೋ ಖುಷಿ! 


" ಸ್ವಾಮಿ! ಬಡಪಾಯಿಗಳಾದ ಯಾತ್ರಿಕರ  ಆಶ್ರಯಕ್ಕಾಗಿಯೂ ಅವರ ಹಸಿವಾರಿಸಲೆಂದೂ ಅನ್ನದಾನ ಶೆಟ್ಟರು ಕಟ್ಟಿಸಿರುವ ಛತ್ರಇದು. ಇಲ್ಲಿಂದ ಇಪ್ಪತ್ತು ನಿಮಿಷಗಳ ಪಯಣದಲ್ಲಿ ಸಿಕ್ಕುವ  ಹಳ್ಳಿಯಲ್ಲಿ ಎಲ್ಲ  ಸವಲತ್ತುಳನ್ನೂ ಒಳಗೊಂಡ ಪ್ರವಾಸಿ ಮಂದಿರವನ್ನು ನಿಮ್ಮಂತಹ ಪ್ರಭುಗಳಿಗಾಗಿಯೇ ಏರ್ಪಡಿಸಲಾಗಿದೆ. ತಾವು..."

ಅಮೃತ ಮಹಾಲ್  ಎತ್ತುಗಳನ್ನು ಕಟ್ಟಿದ್ದ  ಗಂಜಾಂ ಗಾಡಿಯಿಂದಿಳಿದ ಆ ಹಿರಿಯರು ಕೈ ಬೀಸಿ ಗಂಗಾಧರನ ಮಾತನ್ನು ಅಲ್ಲಗಳೆದಿದ್ದರು.


" ಗೊತ್ತಿದೆ! ಆದರೆ ನಮಗೆ ಈ ಪ್ರಶಾಂತವಾದ ವಾತಾವರಣ ಬಹಳ ಇಷ್ಟವಾಗಿದೆ. ಈ ಏಕಾಂತವೂ ಬೇಕಾಗಿದೆ.ನಿಮ್ಮ ಅನ್ನ ಸಾರಿನೂಟವೇ ನಮಗೆ ಅಮೃತವಿದ್ದ  ಹಾಗೆ.ಊಟ ಮುಗಿಸಿ ಕೂಡಲೇ ಹೊರಡ ಬೇಕಿದೆ.ಬೇಗ ಸಿದ್ಧ  ಮಾಡಿ.ಅಲ್ಲಿಯ ವರೆಗೆ ನಮಗೆ  ವಿಶ್ರಾಂತಿ."

ಮಾತನಾಡುತ್ತಲೇ ಗಂಗಾಧರನ ಕೈಗೆ   ಅವರು ಕೊಟ್ಟ ಪುಟ್ಟ ಚೀಲ ಝಣ ಝಣ ಎಂದು ಶಬ್ದವೆಬ್ಬಿಸಿದಾಗ ಗಂಗಾಧರ ಮರು ಮಾತನಾಡದೆ ಅವರನ್ನು ಅಲ್ಲಿದ್ದ ಒಂದೇ ಒಂದು ವಿಶಾಲವಾದ ಶಯನ ಗೃಹಕ್ಕೆ ಕರೆದೊಯ್ದಿ ದ್ದನು.


ತನ್ನ ರಕ್ಷಣೆಗಾಗಿ ವೆಂಕಟರಾವ್ ಅವರು ಕಳುಹಿಸಿಕೊಟ್ಟಿದ್ದ ಕುದುರೆ ಸವಾರರಲೊಬ್ಬ  ಗಾಡಿಯಿಂದ ತಂದಿಟ್ಟ ದಿಂಬಿಗೆ ಒರಗಿ ಚಾಪೆಯ ಮೇಲೆ ಕುಳಿತರು  ಪಾಂಡು ರಂಗಾಚಾರ್ಯರು.


ಅರ್ಧ ರಾತ್ರಿಯ ಮೇಲೆ ಪಟ್ನದಿಂದ ಹೊರಟು, ಸೂರ್ಯ ನೆತ್ತಿಯ ಮೇಲೆ ಉರಿಯುತ್ತಿರುವ ಈ  ಹಗಲಿನ ವರೆಗೆ ಒಂದೇ ಸಮನೆ ಪಯಣ ಮಾಡಿ ದಣಿದಿದ್ದ ಮೈಯನ್ನು ಮೆಲ್ಲನೆ ಚಾಪೆಯ ಮೇಲೆ ಚೆಲ್ಲಿ ಹಗಲುಗನಸು ಕಾಣ ತೊಡಗಿದರು ಆಚಾರ್ಯರು.ಅವರ ಅರಿವಿಲ್ಲದೆಯೇ ಅವರ ಕೈ ಸೊಂಟದ ಪಟ್ಟಿಯಲ್ಲಿ ಜೋಪಾನವಾಗಿದ್ದ ಪತ್ರಗಳ ಥೈಲಿಯನ್ನು ಮುಟ್ಟಿ ನೋಡಿಕೊಂಡಿತು.

ರಾಣಿಯವರ ಕೈಗೆ ರಾಜ್ಯ ಸಿಕ್ಕಲಿ ಬಿಡಲಿ ! ವೆಂಕಟರಾವ್ ಅವರು ಪ್ರಧಾನಿಯಾಗಲಿ ಬಿಡಲಿ ! ತನಗೆ ಬೇಕಾಗಿರುವುದು ಮಾತ್ರ ದೊರಕಿಬಿಟ್ಟರೆ  ತನ್ನ ಈ  ಶ್ರಮ ಸಾರ್ಥಕವಾದಂತೆ.


ಕಂಪೆನಿಯವರು ಸರ್ವ ಶಕ್ತರು. ಹೇಗೂ ರಾಜ್ಯವನ್ನು ವಶಪದಿಸಿಕೊಳ್ಳುತ್ತಾರೆ ಎಂಬುದು ಧಿಟ.


ಹೇಗಾದರೂ ಮಾಡಿ ದೊರೆಗಳ ಮನವೊಲಿಸಿಕೊಂಡು,ಅವರ ಆಡಳಿತದಲ್ಲಿ ತನಗೊಂದು ಗೌರವಾನ್ವಿತ ಪದವಿಯನ್ನು ಗಳಿಸಿಕೊಳ್ಳ ಬೇಕು.ನಂತರ....





ಸ್ವಲ್ಪ ಹೊತ್ತಿನಲ್ಲೇ ಗೊರಕೆ ಶಬ್ದ ಆ ಕೋಣೆಯಲ್ಲಿ ಪ್ರತಿಧ್ವನಿಸ  ತೊಡಗಿತು.


*****************************************************


ತನ್ನ ಮಡದಿ ಸುಲೋಚನಳಿಗೆ ವಿಷಯ ತಿಳಿಸಿ ಒಲೆಯ ಮೇಲೆ  ಕುದಿಯುತ್ತಿದ್ದ ತಪ್ಪಲೆ ನೀರಿಗೆ ಹೆಚ್ಚಾಗಿ  ಅಕ್ಕಿ ಹಾಕುವಂತೆ ಹೇಳಿ ಮತ್ತೊಂದು ಬಿಂದಿಗೆ ನೀರಿಗಾಗಿ ಕೆರೆಯ ಬಳಿ ಧಾವಿಸಿದ ಗಂಗಾಧರ.

ಪಾಪ! ವೃದ್ದರು! ಪಯಣದಿಂದ ಬಳಲಿದ್ದಾರೆ!ಸುಲೋಚನಳಿಗೆ ಹೇಳಿ ಊಟಕ್ಕೆ ಒಂದು ಪಾಯಸವನ್ನೂ  ಮಾಡಿಸ ಬೇಕು.ಹಾಗೆಯೇ  ಕೈ ತೋಟದಿಂದ ಏನಾದರು ತರಕಾರಿ ಸಿಕ್ಕುತ್ತದೆಯೇ ನೋಡ ಬೇಕು.

ಧನವಂತ ಮುದುಕರಿಗಾಗಿ ಮರುಗುತ್ತಲೇ ಬಿಂದಿಗೆಯನ್ನು ತುಂಬಿಸುತ್ತಿದ್ದ ಗಂಗಾಧರ ಕುದುರೆಗಳ ಗೊರಸಿನ ಸಪ್ಪಳ  ಕೇಳಿ ಚಕಿತನಾಗಿ ತಿರುಗಿದನು.
ಆರು ಕುದುರೆಗಳ  ಸವಾರರು ತನ್ನನ್ನು ಕುರಿತೇ ಬರುತ್ತಿರುವುದು ಕಂಡು ಎದ್ದು ನಿಂತನು.




" ಯಾರಪ್ಪ ಇಲ್ಲಿ ಛತ್ರದ ಪಾರುಪತ್ಯ  ನೋಡಿಕೊಳ್ಳೋದು? ನಮಗೆ ಸ್ವಲ್ಪ ಊಟದ  ವ್ಯವಸ್ಥೆ ಮಾಡ  ಬೇಕಿದೆಯಲ್ಲ.."

ಮುಂದೆ ಬಂದ ಸವಾರ ಅಧಿಕಾರದಿಂದ ವಿಚಾರಿಸಿದನು .

" ನಾನೇ..!ನಾನೇ ಇಲ್ಲಿಯ ಪಾರುಪತ್ಯಗಾರ .ಇಲ್ಲಿರೋ ಒಂದೇ ಕೋಣೆಯಲ್ಲಿ ಈಗಾಗಲೇ ಒಬ್ಬರು ಅತಿಥಿಗಳು ಇದ್ದಾರೆ...."

" ನಮಗೆ ಕೋಣೆ ಗೀಣೆ ಬೇಕಿಲ್ಲ.ಆ ಮಂಟಪದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತೇವೆ.ಇಷ್ಟು ತಿನ್ನಲು ಕೊಟ್ಟರೆ ಸಾಕು. ನಂತರ ಹೊರಟು ಹೋಗುತ್ತೇವೆ."

ಕುದುರೆ ಸಾವರನ ಮಾತು  ಗಡುಸಾಗಿತ್ತು. ಪಕ್ಕದ ಹಳ್ಳಿಯ ಪ್ರವಾಸಿ ಮಂದಿರದ ಬಗ್ಗೆ ಹೇಳುವ  ಧೈರ್ಯ ಬರಲಿಲ್ಲ  ಗಂಗಾಧರನಿಗೆ. ಇಂದೆಲ್ಲ ಇದೆ ರೀತಿಯ  ಯಾತ್ರಿಕರು ಬರುತ್ತಿದ್ದರೆ ಅನ್ನದಾನ ಶೆಟ್ಟರು ವರುಷಕ್ಕೆಂದು ತಂದು ಹಾಕಿರುವ ದವಸ ಧಾನ್ಯಗಳೆಲ್ಲ ಖಾಲಿಯಾಗುತ್ತದೆಯೋ ಏನೋ  ಎಂಬ ಚಿಂತೆ ಬೇರೆ  ಹತ್ತಿತು !

ಇವರುಗಳನ್ನು ನೋಡಿದರೆ  'ಇಷ್ಟು'ತಿನ್ನುವವರ ಹಾಗೆ ಕಾಣುತ್ತಿಲ್ಲ.ಮೇಲಾಗಿ ಕೇವಲ ವಿಶ್ರಾಂತಿ ಪಡೆದು ತಿಂದು ಹೋಗಲೆಂದು ಬಂದವರ ಹಾಗೂ ಕಾಣುತ್ತಿಲ್ಲ .

ಅವರುಗಳ ದೋರಣೆ ರೀತಿ ನೀತಿ  ಎಲ್ಲ ಬೆದರಿಸುವಂತಹದ್ದಾಗಿದ್ದವು.
ಏನೋ ಅನರ್ಥ ಸಂಭವಿಸಲಿದೆ   ಎಂಬ  ಚಿಂತೆ  ಗಂಗಾಧರನ ಮನಸ್ಸನ್ನು ಕೊರೆಯ ತೊಡಗಿತು.

ಛತ್ರದ ಅಡಿಗೆ ಕೋಣೆಯನ್ನು ಕುರಿತು ದಾಪುಗಾಲು ಹಾಕಿ  ನಡೆದ ಗಂಗಾಧರ.
  
******************************************************

ಸುಲೋಚನಳಿಗೆ ಅಡಿಗೆ ಮನೆಯ ಮೂಲೆಯಲ್ಲಿ ಹೊದಿಕೆಯೊಳಗೆ ಮುದುಡಿ ಮಲಗಿದ್ದ ಹುಡುಗನ ಬಗ್ಗೆ ಕಳಕಳಿ ಉಂಟಾಯಿತು.ಅಕ್ಕಿಯನ್ನು ತೊಳೆಯುತ್ತಲೇ ಕರುಣೆ ಸೂಸುವ ಕಣ್ಣುಗಳಿಂದ ಒಮ್ಮೆ ಆತನನ್ನು ವೀಕ್ಷಿಸಿದಳು.
ಯಾರು ಹೆತ್ತ ಮಗುವೋ ಏನೋ? ಹೀಗೆ ಬಿಸಿಲಲ್ಲಿ ಬಳಲಿ ಬೆಂಡಾಗಿದ್ದಾನೆ!

ಬಟ್ಟೆಗಳನ್ನು  ಹಿಂಡಿ ಹೆಗಲ ಮೇಲೆ ಹಾಕಿಕೊಂಡು ಬಿಂದಿಗೆಯನ್ನು ಮಿರಿ ಮಿರಿ ಹೊಳೆವ ಹಾಗೆ ಅವಳು ಉಜ್ಜ ತೊಡಗಿದ್ದಾಗ  ಈ ಹುಡುಗ ತೂರಾಡುತ್ತ ಬಂದು  ಕೆರೆಯಂಚಿನಲ್ಲಿ ಕುಸಿದು ಕುಳಿತ. ನೀರಿಗಾಗಿ ಅವನು ಬೊಗಸೆಯನ್ನು ಚಾಚಿದಾಗ ಮುಗ್ಗರಿಸಿ ನೀರಿಗೆ ಬೀಳುವುದರಲ್ಲಿದ್ದ.






ಸುಲೋಚನ ಗಂಗಾಧರನಿಗಾಗಿ ಜೋರಾಗಿ ಕಿರಿಚುತ್ತಲೇ  ತನ್ನ ಕೈ ಕೆಲಸ ಬಿಟ್ಟು ಹುಡುಗನ ಬಳಿ ಧಾವಿಸಿದ್ದಳು.
ಓಡಿ ಬಂದ ಗಂಗಾಧರನ ಜೊತೆಗೂಡಿ ಜ್ಞಾನ ತಪ್ಪುತ್ತಿದ್ದ ಆ ಹುಡುಗನನ್ನು ಛತ್ರಕ್ಕೆ ತಂದು ಸೇರಿಸಿದ್ದಳು ಸುಲೋಚನ.
ಬಣ ಬಣ ಬಿಸಿಯಾಗಿದ್ದ ಮೈ ಹುಡುಗ ಜ್ವರದಿಂದ ಬಳಲಿದ್ದಾನೆ ಎಂಬುದನ್ನು ಸೂಚಿಸಿತ್ತು.
 ಮಣ್ಣು  ಧೂಳಿನಿಂದ ಕೂಡಿ, ಒದ್ದೆ ಮುದ್ದೆಯಾಗಿ, ಅರ್ಧಂಬರ್ಧ ಒಣಗಿದಂತೆಯೂ ಕಂಡ  ಆತನ  ಉಡುಪನ್ನು  ಕಳಚಿ, ಶುಭ್ರವಾದ   ತನ್ನ ಪಂಚೆಯನ್ನು ಉಡಿಸಿದ್ದ ಗಂಗಾಧರ.ಸುಲೋಚನ ಕಾಯಿಸಿ ಕೊಟ್ಟ ಕಷಾಯವನ್ನು ಮಾತನಾಡದೆ ಕುಡಿದು ಮಲಗಿಬಿಟ್ಟಿದ್ದ ಹುಡುಗ . 

ಜ್ವರ ಬಿಟ್ಟು ಹುಡುಗ ಕಣ್ಣು ತೆರೆದ  ಮೇಲೆ ಬಿಸಿ ಸಾರು ಅನ್ನ ತಿನ್ನಿಸ ಬೇಕು. ನಂತರ ಅವನ ಬಗ್ಗೆ   ವಿಚಾರಣೆ ಮಾಡ ಬೇಕು.ಯೋಚಿಸುತ್ತ ಸುಲೋಚನ ತೊಳೆದ ಅಕ್ಕಿಯನ್ನು ತಪ್ಪಲೆಗೆ ಹಾಕಲು ಹೋದಳು.

"ಸುಲೋಚನ ! ತಡಿ ! ತಡಿ!ಇನ್ನೂ ಎರಡು ಸೇರು ಅಕ್ಕಿ ಹಾಕ ಬೇಕಿದೆ." ಏದುಸಿರು ಬಿಡುತ್ತ ವೇಗವಾಗಿ ಬಂದು ತನ್ನ ಮುಂದೆ ನಿಂತ ಗಂಗಾಧರನನ್ನು ಆಶ್ಚರ್ಯದಿಂದ ನೋಡಿದಳು ಸುಲೋಚನ.


" ಯಾಕ್ರೀ ಹೀಗೆ ಓಡಿ ಬರುತ್ತಿರುವಿರಿ? ಇನ್ನಷ್ಟು ಜನ  ಯಾತ್ರಿಕರು ಬಂದಿರುವರೇನು? ಇಂದು ಈ ಛತ್ರಕ್ಕೆ ಅದೇನು ಬಂದಿದೆ ಸುಯೋಗ?"




" ಯೋಗವೋ ಗ್ರಹಚಾರವೋ ಯಾರಿಗೆ ಗೊತ್ತು? ಹೊರಗೆ ಇಣುಕಿ ನೋಡು ! ಪುಂಡರ ಹಾಗೆ ಕಾಣುವ ಆರು ವ್ಯಕ್ತಿಗಳು ಕೊಬ್ಬಿದ ಕುದುರೆಗಳ ಮೇಲೆ ಬಂದಿಳಿದಿದ್ದಾರೆ.ಉಂಡು ಹೋಗಿಬಿಡುತ್ತಾರಂತೆ.ಈ ಕಥೆ ನಂಬುವ ಹಾಗಿದೆಯೇ? ನನಗೇಕೋ ಇವರುಗಳು ದರೋಡೆ ಕೋರರಿರಬಹುದೆಂಬ   ಅನುಮಾನ!"

ಸುಲೋಚನ ಗಂಗಾಧರನೊಡನೆ ಕುತೂಹಲದಿಂದ ಕಿಟಕಿಯ ಬಳಿ ಧಾವಿಸಿದಾಗ, ಹೊದ್ದುಮಲಗಿ ಅವರ ಮಾತುಗಳನ್ನು ಆಲಿಸುತ್ತಿದ್ದ  ಹುಡುಗ ಚುರುಕಾದ.ಇನ್ನೂ ಆರು ಕುದುರೆ ಸವಾರರೆ?ಈ ಅಧ್ವಾನವಾದ ಛತ್ರಕ್ಕೆ ಆಗಮಿಸಿದ್ದಾರೆಯೇ?

ತಾನು ಪಾಂಡು ರಂಗಾಚಾರ್ಯರ ಗಾಡಿಯನ್ನು ಹಿಂಬಾಲಿಸಿದ್ದಾಗ  ಅವರಿಗೆ ಕಾವಲಾಗಿ ನಾಲ್ಕು ಕುದುರೆ ಸವಾರರು ಮಾತ್ರವೇ ಅವರ ಗಾಡಿಯ ಹಿಂದೂ ಮುಂದೂ ಪಯಣಿಸಿದ್ದರು. ಹಾಗಿರಲು ಇನ್ನೂ ಆರು ಸವಾರರು ಯಾಕೆ ಎಲ್ಲಿಂದ ಯಾರಿಗಾಗಿ ಬಂದಿರುವರು? ಇನ್ನೂ ಮಲಗಿರಲಾರದೆ ಎದ್ದು ಕುಳಿತ ಕೇಸರಿ.

" ಓ! ಎಚ್ಚರವಾಯಿತೆ? ಸಧ್ಯ! ಜ್ವರ ಕಡಿಮೆಯಾಗಿರುವ ಹಾಗೆ ಕಾಣುತ್ತಿದೆ.ಈಗ ಗಂಜಿ ಸ್ವಲ್ಪ ಸೇವಿಸು. ಇನ್ನೂ ಸ್ವಲ್ಪ ಹೊತ್ತಿನಲ್ಲಿ ಅಡಿಗೆಯಾಗಿಬಿಡುತ್ತದೆ.  ಬಿಸಿ ಬಿಸಿ  ಅನ್ನ   ಸಾರು  ತಿಂದು ಒಮ್ಮೆ ಬೆವತು ಬಿಟ್ಟರೆ  ಎಲ್ಲ ಸರಿ ಹೋಗುತ್ತದೆ."
  
ಸುಲೋಚನ ಕೇಸರಿಯ ಹಣೆಯ ಮೇಲೆ ಕೈ ಇಟ್ಟು ಬಿಸಿ ಪರಿಶೀಲಿಸುತ್ತಲೇ  ಹಿತವಾಗಿ ನುಡಿದಳು.

" ನಿನ್ನ ಹೆಸರೇನು ತಮ್ಮ? ಎಲ್ಲಿಂದ ಪಯಣ ಮಾಡಿದೆ? ಮಳೆ ಗಿಳೆಯಲ್ಲಿ ನೆನೆದೆ ಏನು?"

ಗಂಗಾಧರನ ಪ್ರಶ್ನೆಗೆ ಏನೆಂದು ಉತ್ತರಿಸ ಬಲ್ಲ? ಕೇಸರಿ ಮೌನವಾಗಿಯೇ ಕುಳಿತಿದ್ದ.






"ಇದೀಗ  ಕಣ್ಣು ಬಿಟ್ಟಿದ್ದಾನೆ.ಈ ಪ್ರಶ್ನೆ ಎಲ್ಲ ಆಮೇಲೆ ಕೇಳುವಿರಂತೆ. ಮೊದಲು ಅಡಿಗೆ ಮುಗಿಸೋಣ.ಇಂದಿನ ನಿಮ್ಮ ಅತಿಥಿಗಳೆಲ್ಲ 'ಬೇಗೆ ಬೇಗ'ವೆಂದು ತುದಿಗಾಲಲ್ಲಿ ನಿಂತಿದ್ದಾರಲ್ಲ." 


ಸುಲೋಚನ ಕೇಸರಿಯ ಕೈಯಿಂದ ಖಾಲಿ ಗಂಜಿ ಬಟ್ಟಲನ್ನು ತೆಗೆದು ಕೊಂಡು ಅಡಿಗೆಯ  ಸಿದ್ಧತೆಯಲ್ಲಿ ತೊಡಗಿದಳು.ಗಂಗಾಧರ ಅವಳಿಗೆ ಸಹಾಯ ಮಾಡ ತೊಡಗಿದ.

******************************************************


 ಪಾಂಡು ರಂಗಾಚಾರ್ಯರು ಥೈಲಿಯನ್ನು ಸೊಂಟಕ್ಕೆ ಬಿಗಿದು ಕೊಂಡಿದ್ದು, ರಾಜ್ಯಲಕ್ಷ್ಮಿ ಅಕ್ಕಳಿಗೂ ಅವರಿಗೂ ನಡುವೆ ನಡೆದ ವಾಗ್ವಾದ,ಅಕ್ಕಳ ಕೆನ್ನೆಗೆ ಹೊಡೆದು ಅವರು ಕತ್ತಲಲ್ಲಿ ಹೊರಟಿದ್ದು ಎಲ್ಲವನ್ನೂ ಕೇಸರಿ ಗಮನಿಸಿಯೇ ಇದ್ದ.ಸುಲ್ತಾನರಿಗೆ ದ್ರೋಹ ಎಸಗುವ ಕಾರ್ಯಕ್ಕೆ ಅವರು ಹೊರಟಿರುವುದು ಖಚಿತವಾಗಿತ್ತು.ಹೇಗಾದರೂ ಅದನ್ನು ತಡೆಯ ಬೇಕೆಂಬ  ವೇಗ ಅವನನ್ನು ದೂಡಿತ್ತು. 


ಏಟು ತಿಂದಿದ್ದ ಅಕ್ಕ ಸಿಡಿಲು ಬಡಿದಂತೆ ಕುಳಿತು ಬಿಟ್ಟಿದ್ದಳು.ಕೇಸರಿ ಚಕ್ಕೆಂದು  ಪಾಂಡು ರಂಗಾಚಾರ್ಯರನ್ನು ಹಿಂಬಾಲಿಸಲು ನಿರ್ಧರಿಸಿದ್ದನು.ಮನೆಯ ಮೆಟ್ಟಲಿಳಿದಾಗ   ಬಾಗಿಲ ಪಕ್ಕದಲ್ಲಿ ಒರಗಿಸಿಟ್ಟಿದ್ದ ಆಚಾರ್ಯರ ಊರುಗೋಲನ್ನು ಅವನು ಅನಿಚ್ಛೆಯಾಗಿ  ತೆಗೆದುಕೊಂಡಿದ್ದ.
   
ಕತ್ತಲಿನಲ್ಲಿ ಅವರಿಗೆ  ಅರಿವಾಗದಂತೆ ಹಿಂದೆ ಹಿಂದೆಯೇ ಹೋಗುತ್ತಿದ್ದ  ಕೇಸರಿಗೆ ಕೋಟೆಯ   ಹೊರಗೆ ಅವರು ನಡೆದಾಗ ಎದೆ 'ಝಲ್' ಎಂದಿತು. 'ಪುಕ ಪುಕ' ಹೊಡೆದು ಕೊಂಡ ಎದೆಯನ್ನು ಒಂದು ಕೈಯಿಂದ ಅದುಮಿ ಹಿಡಿದು, ಅವನು ಕೋಟೆ ಬಾಗಿಲನ್ನು ತಲಪಿದಾಗ, ಅವನನ್ನೊಮ್ಮೆ ತೀಕ್ಷ್ಣವಾಗಿ ವೀಕ್ಷಿಸಿ ನಂತರ ಹೊರಗೆ ಹೋಗುವಂತೆ ಸನ್ನೆ ಮಾಡಿದ್ದ ದ್ವಾರಪಾಲಕ.
ಹೊರಗೆ   ಸ್ವಲ್ಪ ದೂರ ನಡೆದ ನಂತರ ಆಶ್ಚರ್ಯ ಮತ್ತು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿದ್ದ   ಕೇಸರಿ.

ಪಟ್ನದಲ್ಲೇ  ಯಾರದ್ದೋ ಭೇಟಿಗಾಗಿ ಆಚಾರ್ಯರು ಹೊರಟಿರುವುದಾಗಿ ಕಲ್ಪಿಸಿಕೊಂಡಿದ್ದ  ಕೇಸರಿಗೆ, ಅವರು  ಕೋಟೆಯಿಂದಾಚೆ ಸಾಗಿದ್ದು ಮಾತ್ರವಲ್ಲದೆ , ಮರಗಳ ಮರೆಯಲ್ಲಿ ಕಾದಿದ್ದ ತೆಪ್ಪ ಹತ್ತಿ ಕಾವೇರಿಯನ್ನು ದಾಟಿದ್ದು ಕಂಡಾಗ  ಪರಿಸ್ಥಿತಿ ಗಂಭೀರವಾದದ್ದು ಎಂಬ ಅರಿವಾಯಿತು.ಇವರು ಮದರಾಸು ಪಟ್ನಕ್ಕೆ ಹೊರಟೇ ಬಿಟ್ಟಿದ್ದಾರೆಯೇ ?

ಯಾರ ಸಹಕಾರವನ್ನೂ ಕೋರಲಾರದ ಅಂತಹ ಪರಿಸ್ತಿಥಿಯಲ್ಲಿ ತಬ್ಬಿಬ್ಬಾಗಿ ನಿಂತ  ಕೇಸರಿ ಮುಂದೇನು  ಮಾಡ ಬೇಕೆಂದು ಕ್ಷಣದಲ್ಲಿ ನಿರ್ಧರಿಸಿದ್ದ.
 ಸುಲ್ತಾನರಿಗೆ ಕೇಡು ಮಾಡಬಲ್ಲ ವೆಂಕಟರಾವ್ ಅವರ ಆ ಪತ್ರಗಳು  ದೊರೆಗಳ ಕೈ ಸೇರಬಾರದೆಂಬ ಧೃಡ ಸಂಕಲ್ಪ  ಕೇಸರಿಯನ್ನು ಮುಂದೂಡಿತ್ತು.





ರಾತ್ರಿಯ ಚಳಿಯಲ್ಲಿ ಹಿಂದುಮುಂದು ಯೋಚಿಸದೆ ಕಾವೇರಿಗೆ ಹಾರಿ ಈಸ ತೊಡಗಿದ್ದ  ಕೇಸರಿ. ದೂರದಲ್ಲಿ ಚಂದ್ರನ ಬೆಳಕಿನಲ್ಲಿ ನೀರನ್ನು ಸೀಳಿಕೊಂಡು ಮೊಸಳೆಯ ಮೂತಿಯೊಂದು ತನ್ನನ್ನು ಕುರಿತು ವೇಗವಾಗಿ ಬರುತ್ತಿರುವುದು  ಕಂಡು,ಬಾಯಲ್ಲಿ ಕಚ್ಚಿ ಕೊಂಡಿದ್ದ ಪಾಂಡು ರಂಗಾಚಾರ್ಯರ ಊರು ದಂಡವನ್ನು  ಜೋರಾಗಿ ಎತ್ತಿ ಒಗೆದಿದ್ದ ಕೇಸರಿ. ದಂಡವನ್ನು ಕುರಿತು ತನ್ನ ದಿಶೆ ಬದಲಾಯಿಸಿ  ಹೋದ  ಮೊಸಳೆ ನಂತರ ಏಕೋ ತಲೆ ಎತ್ತಲೇ ಇಲ್ಲ.




ಇದ್ದ  ಒಂದೇ ಆಯುಧವನ್ನು ಕಳೆದುಕೊಂಡ ಕೇಸರಿಗೆ,  ಹೀಗೆ   ಮಧ್ಯ ರಾತ್ರಿಯಲ್ಲಿ, ಯಾರಿಗೂ ತಿಳಿಸದೇ,ತನ್ನ ಖಡ್ಗವನ್ನು ಕೂಡ ತೆಗೆದುಕೊಳ್ಳದೆ ಹೊರಟಿರುವುದು ಸರಿಯೇ ಎಂಬ ಅಳುಕು ಮೊದಲ ಬಾರಿಗೆ ಉಂಟಾಯಿತು.

 ಮನಸಲ್ಲಿ  ಭಯ ಅಂಕುರಿಸಿದ್ದರೂ, ಸುಲ್ತಾನರಿಗೆ ಕೇಡು  ಬಗೆಯುವವರ  ಸಂಚನ್ನು ಒಡೆದು ಹಾಕುವ ಒಂದೇ  ಧೃಡ ಚಿತ್ತ ಅವನನ್ನು ದೂಡಿಕೊಂಡು ಹೋಗಿ ಆಚೆ ದಡ ಸೇರಿಸಿತ್ತು.      

ಆಚಾರ್ಯರು ಗಾಡಿ ಹತ್ತಿ ತನ್ನ ಅಂಗ ರಕ್ಷಕರೊಡನೆ ಪಯಣ ಬೆಳೆಸಿದಾಗ , ಆ ಜಾಡು ಹಿಡಿದು ನಡಿಗೆಯಲ್ಲೇ ಕೇಸರಿ  ಈ ಅನ್ನ ದಾನ ಛತ್ರದವರೆಗೂ ಬಂದಿದ್ದ. ಮಾಯಾ ಇದ್ದಿದ್ದರೆ ಎಷ್ಟು ಅನುಕೂಲವಾಗಿರುತ್ತಿತ್ತು ಎಂದು ಹಂಬಲಿಸಿತು  ಅವನ ಮನಸ್ಸು .

ಪರಿವಾರ ಕವಲೊಡೆದ ಮಣ್ಣು ದಾರಿ ಹಿಡಿದಿದ್ದಾಗ ಕೇಸರಿ  ಅಡ್ಡ ದಾರಿ ಹಿಡಿದು ಬಂಡೆಗಳನ್ನು ಹತ್ತಿ  ಹಾರಿ  ಮೊದಲೇ ಕೆರೆ ಸೇರಿಕೊಂಡಿದ್ದ. 


ಹಸಿವಿನಿಂದಲೂ ಆಯಾಸದಿಂದಲೂ ಸೊರಗಿದ್ದ ತನ್ನನ್ನು ಕಾಪಾಡಿದ್ದ 
ಸುಲೋಚನ ಗಂಗಧಾರರ ಕರುಣೆಗೆ ತಾನು  ಎಂದೂ ಋಣಿ. ಅವರ ಆರೈಕೆಯಿಂದ  ಕಳೆದುಕೊಂಡಿದ್ದ ಬಲ ಮತ್ತೇ ತನಗೆ ದೊರಕಿದಂತಿತ್ತು.  
ಮುಂದೇನು ಮಾಡ ಬೇಕೆಂದು ಚಿಂತಿಸ ತೊಡಗಿದ ಕೇಸರಿ.


******************************************************


ತನ್ನ ಕೋಣೆಯೊಳಗೆ ನುಗ್ಗಿದ್ದಲ್ಲದೆ ತನ್ನ ಸೊಂಟಕ್ಕೆ ಕೈ ಹಾಕಿದವನನ್ನು ಕಂಡು ಕೆಂಡಾಮಂಡಲವಾದರು  ಪಾಂಡು ರಂಗಾಚಾರ್ಯರು.

" ಯೇ ! ಯಾರೋ ನೀನು ? ಮೊದಲು ಕೈ ತೆಗಿ .ನನ್ನ ಸೊಂಟಕ್ಕೆ ಕೈ ಹಾಕುವ ಧೈರ್ಯ ನಿನಗೆ ಯಾರು ಕೊಟ್ಟರು?"




ಲಜ್ಜೆ ಬಿಟ್ಟು ಎರಡು ಸಾರಿ ಅನ್ನ ಸಾರು ಹಾಕಿಸಿಕೊಂಡು  ತಿಂದು ಆಗತಾನೆ  ಕೈ ತೊಳೆದಿದ್ದ  ಕೇಸರಿ. ಸುಲೋಚನ ಒಗೆದು ಬಂಡೆಯ ಮೇಲೆ ಹರವಿದ್ದ ತನ್ನ  ವಸ್ತ್ರಗಳನ್ನು ಉಡುತ್ತಿದ್ದಾಗ , ಶಯನ ಗೃಹದಿಂದ ಕೇಳಿ ಬಂದ ಆಚಾರ್ಯರ ದನಿ ಅವನ ಗಮನ ಸೆಳೆಯಿತು.


" ಏ ಮುದುಕ!! ನನಗೆ ಬೇಕಾಗಿರುವುದು ಈ ಥೈಲಿ. ನೀನು ಸುಮ್ಮನಿದ್ದರೆ ಇದನ್ನು ತೆಗೆದುಕೊಂಡು ನಾನು ಹೋಗುತ್ತಲೇ ಇರುತ್ತೇನೆ.ಅಡ್ಡಿ ಮಾಡಿದೆಯೋ ನಿನ್ನ ಜೀವ ನಿನ್ನದ್ದಲ್ಲ. ನಮ್ಮ ಶಿವ ನಾಯಕರು ಇದಕ್ಕಾಗಿ ಹೆದ್ದಾರಿಯಲ್ಲಿ ಕಾದಿದ್ದಾರೆ. ನೀನಾಗಿಯೇ ಕೊಟ್ಟುಬಿಟ್ಟರೆ ಒಳ್ಳೆಯದು.ಬೇಗ !"

" ಯಾರು?  ಶಿವ ನಾಯಕನೇ? ನನ್ನ ಪಯಣದ ವಿವರ ಆತನಿಗೆ ತಿಳಿದೇ ಇದೆ . ಅವನೇಕೆ ನನ್ನನ್ನು ತಡೆಯುತ್ತಾನೆ?"


" ಈ ಪತ್ರಗಳನ್ನು ದೊರೆಗಳ ಕೈಗೆ ತಾನೇ ಸಮರ್ಪಿಸ ಬೇಕೆಂಬುದು ಅವರ ಇಚ್ಛೆ.ಇಷ್ಟಕ್ಕೂ ಫಿರಂಗಿಯವರಿಗೆ  ಅವರು ಎಷ್ಟೋ ಸತ್ಕಾರಗಳನ್ನು ಮಾಡಿದ್ದಾರೆ. ಹಾಗಿರಲು ರಾಯಬಾರಿಗೆ  ನಿನಗಿಂತ ಅವರೇ ಹೆಚ್ಚು  ಅರ್ಹರಲ್ಲವೇ?ಇದು ಆ ವೆಂಕಟರಾವ್ ಅವರಿಗೆ ತಿಳಿಯ ಬೇಡವೇ? ಸರಿ, ಬೇಗ ತೆಗೆ ಥೈಲಿಯನ್ನ.!"  


ಕೇಸರಿ ಒಳಗೆ ಇಣುಕಿದಾಗ ಒಬ್ಬ ಸಿಪಾಯಿ ಆಚಾರ್ಯರ ಸೊಂಟ ಪಟ್ಟಿಯಿಂದ ಪತ್ರಗಳಿದ್ದ ಥೈಲಿಯನ್ನು ಬಲವಂತವಾಗಿ  ಕಸಿದು ಕೊಂಡು ಅವರನ್ನು ಕೆಳಕ್ಕೆ ನೂಕುತ್ತಿದ್ದ.

ಶಿವ ನಾಯಕನ ಹೆಸರು ಕೇಳಿದ ಮಾತ್ರಕ್ಕೆ ಕೇಸರಿ ಸಿಡಿದೆದ್ದ. ಮಿಂಚಿನಂತೆ ಒಳನುಗ್ಗಿ  ಕುಡಿಯಲೆಂದು ನೀರು  ತುಂಬಿಸಿಟ್ಟಿದ್ದ ಬಿಂದಿಗೆಯನ್ನು ಎತ್ತಿ ಆ ಸಿಪಾಯಿಯ ತಲೆಯನ್ನು ಹಿಂದಿನಿಂದ ಜೋರಾಗಿ  ಜಜ್ಜಿದ.


  ಅನಿರೀಕ್ಷಿತವಾದ ಈ  ಹಲ್ಲೆಯಿಂದ  ತಾಳಲಾರದ ಯಾತನೆಯುಂಟಾಗಿ  ಪೆಟ್ಟು ತಿಂದ ಕಾಡು ಪ್ರಾಣಿಯಂತೆ ಚೀರುತ್ತಾ ಕೆಳಕ್ಕುರುಳಿದ ಸಿಪಾಯಿ.ಒಂದು ಕೈ ತಲೆಯ ಮೇಲೆ ಇದ್ದರೂ ಮತ್ತೊಂದು ಕೈಯಿನಿಂದ ತನ್ನನ್ನು  ಸಮೀಪಿಸುತ್ತಿದ್ದ  ಕೇಸರಿಯ ಕಾಲೆಳೆಯಲು ಪ್ರಯತ್ನಿಸಿದನು.ನಿಂಬ ಮಲ್ಲನ ಶಿಷ್ಯ ಚಾಲಾಕಿನಿಂದ ದೂರ ನೆಗೆದು, ಸಿಪಾಯಿಯನ್ನು ಒದ್ದು ,ಥೈಲಿಯನ್ನು ಮತ್ತು ಅವನ ಖದ್ಗವನ್ನೂ  ಅವನಿಂದ ಕಸಿದುಕೊಂಡನು. 

ಆ ವರೆಗೂ ಆ ದೃಶ್ಯವನ್ನು ನಂಬಲಾರದೆ ಬಾಯಿ ಬಿಟ್ಟು ವೀಕ್ಷಿಸುತ್ತಿದ್ದ ಆಚಾರ್ಯರು ,ಕೇಸರಿ ಆ ಥೈಲಿಯನ್ನು ತನ್ನ ಸೊಂಟಕ್ಕೆ ಬಿಗಿದು ಕೊಳ್ಳುತ್ತಿರುವುದನ್ನು ಕಂಡು  ಗಾಬರಿಯಾದರು.

" ಏ ಕೇಸರಿ ! ಏನು ಮಾಡುತ್ತಿರುವೆ? ಕೊಡು ಆ ಥೈಲಿಯನ್ನು!"


" ಇದನ್ನ ಎಲ್ಲಿಗೆ ಸೇರಿಸ ಬೇಕೋ ಅಲ್ಲಿಗೆ ಸೇರಿಸುತ್ತೇನೆ ಆಚಾರ್ಯರೇ!"


" ಲೋ ! ಲೋ ! ದ್ರೋಹಿ!ನನ್ನ ಮನೆ ಅನ್ನ ತಿಂದಿಲ್ಲವೆ ನೀನು? ಉಪ್ಪಿಟ್ಟ ಮನೆಗೆ ದ್ರೋಹ ಬಗೆಯುತ್ತಿರುವೆಯಾ?"

ಚೀರಿದರು ಪಾಂಡುರಂಗಾಚಾರ್ಯರು  .

" ಇದನ್ನು ನೀವು ಹೇಳುವುದೇ ಆಚಾರ್ಯರೇ?"
ನಿಧಾನವಾಗಿ ನುಡಿದು ಕೇಸರಿ ಅವರಿಗೆ ಬೆನ್ನು ಮಾಡಿ ಕೋಣೆಯಾಚೆ ಹೆಜ್ಜೆಹಾಕಿದ..


"ಲೇ..ಲೇ..ಲೇಯ್ !ಹಿಡಿಯಿರೋ ಅವನನ್ನ!"


ಪಾಂಡು ರಂಗಾಚಾರ್ಯರ ಕೂಗೂ ಪೆಟ್ಟು ತಿಂದ ಸಿಪಾಯಿಯ ಚೀತ್ಕಾರವೂ ಹೊರಗಿದ್ದ ಸಿಪಾಯಿಗಳನ್ನು ಎಚ್ಚರಿಸಿದವು.

 ಶಿವನಾಯಕನ ಒಬ್ಬ  ಸೇವಕನೂ  ಆಚಾರ್ಯರ  ಅಂಗ ರಕ್ಷಕರಿಬ್ಬರೂ ಕೂಡಲೇ ಧಾವಿಸಿ ಬಂದರು.ಬಿಂದಿಗೆಯಿಂದ ಚೆಲ್ಲಿದ್ದ ನೀರಿನಲ್ಲಿ ಜಾರಿ ಇಬ್ಬರು          ಕೆಳಕ್ಕುರುಳಿದರು. ಮೂರನೆಯವನ   ಕೈಗೆ ಸಿಕ್ಕದೆ ಕೇಸರಿ ಆಟ ತೋರಿಸಿ ಛತ್ರದಾಚೆ ಓಡಲು ತೊಡಗಿದನು.




 ಆಚಾರ್ಯರ ಅಂಗ ರಕ್ಷಕರು ನಾಲ್ವರು.ಶಿವನಾಯಕನ ಸಿಪಾಯಿಗಳು ಆರು ಜನ.ಒಟ್ಟು ಹತ್ತು ಎದುರಾಳಿಗಳು.ಮೂವರು ಆಗಲೇ ನೆಲ ಕಚ್ಚಿದ್ದಾರೆ.ಇನ್ನು ಉಳಿದಿರುವ ಏಳು ಜನರನ್ನು ನಿಭಾಯಿಸ ಬೇಕು.


"ನಿಭಾಯಿಸುತ್ತೇನೆ!" 


ಕೇಸರಿ ಮರಿ ಮಿಂಚಿನಂತೆ  ಖಡ್ಗಪಾಣಿಯಾಗಿ  ಸರ್ರನೆ  ಹೊರಕ್ಕೆ ಹಾರಿದಾಗ ಉಳಿದಿದ್ದ ಏಳು ಸಿಪಾಯಿಗಳು ಮಾತ್ರವಲ್ಲದೆ, ಮಣ್ಣು ದಾರಿ ಹಿಡಿದು  ಆಗತಾನೆ ಆಗಮಿಸಿದ್ದ ಇನ್ನೂ ಹತ್ತಾರು ಕುದುರೆ ಸವಾರರ ಒಂದು ದಂಡೇ ಅವನಿಗಾಗಿ   ಕಾದಿತ್ತು!

***********************ಆಮೇಲೆ?************************